ಗೋಲ್ಡನ್ ಲೆಗ್ ಕೃತಿ ಶೆಟ್ಟಿ; ನಟಿಸಿದ 3 ಚಿತ್ರಗಳೂ ಯಶಸ್ವಿ

Keerthi Shetty
Published on

ಒಂದೇ ವರ್ಷದಲ್ಲಿ ಟಾಲಿವುಡ್​ನ ಗೋಲ್ಡನ್ ಲೆಗ್ ಎನಿಸಿಕೊಂಡಿದ್ದಾರೆ ಕರ್ನಾಟಕ ಮೂಲದ ಕೃತಿ ಶೆಟ್ಟಿ. ಅದಕ್ಕೆ ಕಾರಣ, ಕೃತಿ ಅಭಿನಯದ ‘ಬಂಗಾರ್ರಾಜು’ ಹಿಟ್ ಆಗಿದ್ದು. ಒಂದು ಚಿತ್ರ ಯಶಸ್ವಿಯಾದ ಮಾತ್ರಕ್ಕೆ ಆಕೆ ಚಿತ್ರರಂಗದ ಪಾಲಿಗೆ ಗೋಲ್ಡನ್ ಲೆಗ್ ಆಗುವುದು ಹೇಗೆ ಎಂಬ ಪ್ರಶ್ನೆ ಬರಬಹುದು. ಬರೀ ಒಂದಲ್ಲ, ಕೃತಿ ಅಭಿನಯದ ಮೂರು ಚಿತ್ರಗಳು ಒಂದರ ಹಿಂದೊಂದು ಯಶಸ್ವಿಯಾಗುವ ಮೂಲಕ ಇಂಥದ್ದೊಂದು ಬಿರುದು ಪಡೆದುಕೊಂಡಿದ್ದಾರೆ.

ಒಂದು ವರ್ಷದ ಹಿಂದೆ, ಕೃತಿ ಯಾರು ಎಂದು ತೆಲುಗು ಚಿತ್ರರಂಗದ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ‘ಉಪ್ಪೆನಾ’ ಎಂಬ ಚಿತ್ರ ಯಶಸ್ವಿಯಾಗಿದ್ದೇ ಆಗಿದ್ದು, ಅವರ ಜನಪ್ರಿಯತೆ, ಬೇಡಿಕೆ ಎರಡೂ ಹೆಚ್ಚಿತು. ಕ್ರಮೇಣ ಒಂದಿಷ್ಟು ಚಿತ್ರಗಳನ್ನು ಕೃತಿ ಒಪ್ಪಿಕೊಂಡರು. ಈ ಪೈಕಿ ‘ಶ್ಯಾಮ್ ಸಿಂಗಾ ರಾಯ್’ ಎಂಬ ಚಿತ್ರ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಯಶಸ್ವಿಯಾಯಿತು. ಈಗ ‘ಬಂಗಾರ್ರಾಜು’ ಸಹ ಯಶಸ್ವಿ ಆಗಿ, ಕೃತಿ ಹ್ಯಾಟ್ರಿಕ್ ಬಾರಿಸಿದಂತಾಗಿದೆ.

ಅದೇ ಕಾರಣಕ್ಕೆ, ಟಾಲಿವುಡ್ ಮಂದಿ ಕೃತಿಯನ್ನು ಹಾಡಿ ಹೊಗಳುತ್ತಿದ್ದಾರೆ. ಸದ್ಯದಲ್ಲೇ ಕೃತಿ ಸಂಭಾವನೆ ಸಹ ಏರಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಅಂದಹಾಗೆ, ಕೃತಿ ಇದೀಗ ರಾಮ್ ಪೋತಿನೇನಿ ಅಭಿನಯದ ‘ವಾರಿಯರ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಇನ್ನೊಂದೆರೆಡು ಚಿತ್ರಗಳು ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net