

ಕಳೆದ ವರ್ಷ ಕೃತಿ ಸನೋನ್ ಅಭಿನಯದ ಎರಡು ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು. ಒಂದು ‘ಮಿಮಿ’. ಇನ್ನೊಂದು ‘ಹಮ್ ದೋ ಹಮಾರೆ ದೋ’. ಈ ಪೈಕಿ ‘ಮಿಮಿ’, ಒಟಿಟಿಯಲ್ಲಿ ಬಿಡುಗಡೆಯಾಗಿ ದೊಡ್ಡ ವೀಕ್ಷಣೆ ಪಡೆದಿತ್ತು. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಫುಲ್ ಖುಷಿಯಾಗಿರುವ ಕೃತಿ, ಇದರಿಂದ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಧೈರ್ಯ ಬಂದಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹೊಸ ಪ್ರಯತ್ನಗಳನ್ನು ಮಾಡಬೇಕು ಎಂಬ ಹಸಿವು ಜಾಸ್ತಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ವರ್ಷದ ಬಗ್ಗೆ ಕೃತಿ ಇನ್ನೂ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ವರ್ಷ ಕೃತಿ ಅಭಿನಯದ ಐದು ಚಿತ್ರಗಳು ಬಿಡುಗಡೆಯಾಗಲಿಕ್ಕಿದ್ದು, ಐದೂ ಚಿತ್ರಗಳು ವಿಭಿನ್ನ ಜಾನರ್ಗೆ ಸೇರಿದ ಚಿತ್ರಗಳಂತೆ. ಅಷ್ಟೇ ಅಲ್ಲ, ಐದು ಚಿತ್ರಗಳು ದೊಡ್ಡ ಸ್ಟಾರ್ಗಳ ಜತೆಯಾಗಿರುವುದರಿಂದ ಕೃತಿ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಅಂದಹಾಗೆ, ಈ ವರ್ಷ ಬಿಡುಗಡೆಯಾಗಬೇಕಿರುವ ಕೃತಿ ಸನೋನ್ ಅಭಿನಯದ ಚಿತ್ರಗಳ ಪಟ್ಟಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.
ಪ್ರಭಾಸ್ ಅಭಿನಯದ ‘ಆದಿಪುರುಷ್’, ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’, ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’, ವರುಣ್ ಧವನ್ ಅಭಿನಯದ ‘ಭೇಡಿಯಾ’ ಮತ್ತು ಕಾರ್ತಿಕ್ ಆರ್ಯನ್ ಅಭಿನಯದ ‘ಶೆಹ್ಜಾದ’ ಚಿತ್ರಗಳು ಬಿಡುಗಡೆಯಾಗಬೇಕಿವೆ. ಈ ಪೈಕಿ ಮೂರು ಚಿತ್ರಗಳ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬಿಡುಗಡೆಗೆ ಅಣಿಯಾಗುತ್ತಿವೆಯಂತೆ. ಇನ್ನೆರಡು ಚಿತ್ರಗಳ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಇನ್ನಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಕೃತಿ ಉತ್ಸುಕರಾಗಿದ್ದಾರೆ. -ಏಜೆನ್ಸೀಸ್