

‘ಲವ್ ಮಾಕ್ಟೇಲ್’ ಚಿತ್ರದ ಸಂತೋಷ ಕೂಟದಲ್ಲಿ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್. ಈ ವರ್ಷ ಮದುವೆಯಾಗುವುದಾಗಿಯೂ ಹೇಳಿದ್ದರು. ಅದಾಗಿ ಈ ಎರಡ್ಮೂರು ತಿಂಗಳಲ್ಲಿ ಹಲವು ಬಾರಿ ತಮ್ಮ ಫೋಟೋಗಳನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರೀತಿಯ ಬಗ್ಗೆ, ಸ್ಪೂರ್ತಿಯ ಬಗ್ಗೆ ಆಗಾಗ ಮಾತಾಡುತ್ತಲೇ ಇರುತ್ತಾರೆ. ಎಲ್ಲಾ ಸರಿ, ಈ ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು?
‘ನಾನೇ’ ಎನ್ನುತ್ತಾರೆ ಕೃಷ್ಣ. ಅವರು ಲವ್ ಪ್ರಪೋಸ್ ಮಾಡಲಿಲ್ಲವಂತೆ. ನೇರವಾಗಿ ಮದುವೆಗೇ ಪ್ರಪೋಸ್ ಮಾಡಿದ್ದರಂತೆ. ಹೌದು, ವಿಜಯವಾಣಿ ಜತೆ ಮಾತನಾಡುತ್ತಾ, ‘ಕೆಲವು ವರ್ಷಗಳ ಹಿಂದಿನ ಮಾತು. ಜೀವನದಲ್ಲಿ ಸೆಟಲ್ ಆಗಬೇಕು, ವೃತ್ತಿಯ ಬಗ್ಗೆ ಇನ್ನಷ್ಟು ಫೋಕಸ್ ಆಗಬೇಕು ಅಂತ ನಿರ್ಧಾರ ಮಾಡಿದೆ. ಯಾರು ಬೆಸ್ಟು ಅಂತ ಯೋಚಿಸಿದಾಗ, ಮಿಲನಾ ಅಂತಂದುಕೊಂಡೆ. ಮೊದಲನೆಯದಾಗಿ, ಅವರು ನಮ್ಮ ವೃತ್ತಿಯವರು. ಎರಡನೆಯದಾಗಿ ಅವರ ಕುಟುಂಬದ ಬಗ್ಗೆ ಗೊತ್ತಿತ್ತು. ಹಾಗಾಗಿ ಪ್ರಪೋಸ್ ಮಾಡಿದೆ. ಸ್ವಲ್ಪ ಸಮಯ ತೆಗೆದುಕೊಂಡು ಓಕೆ ಎಂದರು. ಅದಕ್ಕೂ ಮುನ್ನ ಅವರ ಬಗ್ಗೆ ವೈಯಕ್ತಿಕವಾಗಿ ಹೆಚ್ಚು ಗೊತ್ತಿರಲಿಲ್ಲ. ಆ ನಂತರ ಇಬ್ಬರೂ ಸಾಕಷ್ಟು ಸಮಯ ಜತೆಯಾಗಿ ಕಳೆದ ನಂತರ ಕ್ಲೋಸ್ ಆದೆವು’ ಎನ್ನುತ್ತಾರೆ ಕೃಷ್ಣ.
ಇದನ್ನೂ ಓದಿ ಓಲಾ ಕಂಪನಿಯ 1,400 ನೌಕರರು ಕೆಲಸದಿಂದ ವಜಾ
ಮದುವೆಯ ನಂತರವೂ ನಟನೆ
ಮದುವೆಯ ನಂತರವೂ ಮಿಲನಾ ನಟನೆ ಮುಂದುವರೆಸುತ್ತಾರೆ ಎನ್ನುವ ಕೃಷ್ಣ, ‘ಇಷ್ಟು ವರ್ಷ ನಾವು ಯಾವ ಬ್ರೇಕ್ಗೆ ಕಾಯುತ್ತಿದ್ದೆವೋ, ಅದು ಈಗ ಸಿಕ್ಕಿದೆ. ಇಬ್ಬರಿಗೂ ಹಲವು ಅವಕಾಶಗಳು ಸಿಗುತ್ತಿವೆ. ಈ ಮಧ್ಯೆ ಮದುವೆಯಾದರೆ, ನಟನೆ ಮುಂದುವರೆಯುತ್ತದೋ ಇಲ್ಲವೋ ಎಂಬ ಗೊಂದಲ ಇರುತ್ತದೆ. ಮದುವೆಯಾದ ಮೇಲೂ ಮಿಲನಾ ನಟನೆ ಮುಂದುವರಿಸುತ್ತಾರೆ’ ಎಂದು ಹೇಳಲು ಕೃಷ್ಣ ಮರೆಯುವುದಿಲ್ಲ. ಇನ್ನು ‘ಲವ್ ಮಾಕ್ಟೇಲ್’ ಚಿತ್ರದ ಮುಂದಿನ ಭಾಗದ ಬರವಣಿಗೆ ನಡೆಯುತ್ತಿದ್ದು, ಲಾಕ್ಡೌನ್ ಸಂಪೂರ್ಣವಾಗಿ ಮುಗಿದು, ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ, ಚಿತ್ರೀಕರಣ ಪ್ರಾರಂಭವಾಗಲಿದೆ.