

ಬೆಂಗಳೂರು: ಮೂರು ವರ್ಷಗಳ ಹಿಂದೆಯೇ 'ಮದರಂಗಿ' ಕೃಷ್ಣ ಅಭಿನಯದಲ್ಲಿ 'ಚಂದ್ರಲೇಖ ರಿಟರ್ನ್ಸ್' ಎಂಬ ಚಿತ್ರವನ್ನು ಘೋಷಿಸಿದ್ದರು ಆಕ್ಷನ್ ಚಿತ್ರಗಳಿಗೆ ಜನಪ್ರಿಯರಾಗಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್. ಆದರೆ, ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಇನ್ನು, ಆ ಚಿತ್ರವನ್ನು ಎಲ್ಲರೂ ಮರತೇ ಹೋಗಿರುವ ಹೊತ್ತಿನಲ್ಲಿ, ಓಂಪ್ರಕಾಶ್ ರಾವ್ ಮತ್ತೆ ಆ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ.
ಓಂಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರವಾಗಿರುವ 'ಚಂದ್ರಲೇಖ ರಿಟರ್ನ್ಸ್'ಗೆ ಮತ್ತೆ ಚಾಲನೆ ಸಿಕ್ಕಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ಆನಂದರಾವ್ ಸರ್ಕಲ್ ನ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಚಿತ್ರತಂಡದವರು ಹಾಜರಿದ್ದರು.
ಎಲ್ಲರಿಗೂ ಗೊತ್ತಿರುವಂತೆ, 'ಚಂದ್ರಲೇಖ' ಚಿತ್ರವು ಹಾರರ್-ಥ್ರಿಲ್ಲರ್ ಕಥೆ ಹೊಂದಿತ್ತು. ಈ ಚಿತ್ರ ಅದರ ಮುಂದುವರೆದ ಭಾಗವಲ್ಲದಿದ್ದರೂ, ಇದೂ ಹಾರರ್ ಚಿತ್ರವಾಗಿರುವುದರಿಂದ, ಚಿತ್ರಕ್ಕೆ 'ಚಂದ್ರಲೇಖ ರಿಟರ್ನ್ಸ್' ಎಂಬ ಹೆಸರನ್ನು ಇಡಲಾಗಿದೆ. ಇದಕ್ಕೂ ಮುನ್ನ ಶಾನ್ವಿ ಶ್ರೀವಾತ್ಸವ್ ಅಭಿನಯದ 'ಕಸ್ತೂರಿ ಮಹಲ್' ಚಿತ್ರವನ್ನು ನಿರ್ಮಿಸಿರುವ ರವೀಶ್, ಈ ಚಿತ್ರವನ್ನು ಶ್ರೀ ಭವಾನಿ ಆರ್ಟ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.
ಕೃಷ್ಣ ಜತೆಗೆ ಸಾಧುಕೋಕಿಲ, ನಾಗಶೇಖರ್, ವಿವಿನ್ ಸೂರ್ಯ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ನಟಿಸಲಿದ್ದು, ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಈ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ. ಆಗಸ್ಟ್ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.