

ಮುಂಬೈ: ಹಿಂದಿಯ ಕೃಷ್ಣ ಧಾರಾವಾಹಿಯನ್ನು ನೋಡಿದವರಿಗೆ ಅದರಲ್ಲಿ ಭೀಷ್ಮ ಪಾತ್ರವನ್ನು ನಿರ್ವಹಿಸಿದ್ದ ಸುನಿಲ್ ನಗರ್ ನೆನಪಿರುತ್ತಾರೆ. ಅದ್ಭುತ ನಟನೆಯಿಂದಿಗೆ ಜನರ ಮನಸ್ಸನ್ನು ಗೆದ್ದಿದ್ದ ಅವರು ಅನೇಕ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ಅವರ ಜೀವನ ಅತ್ಯಂತ ಕಷ್ಟವಾಗಿದೆ.
ಅವರಿಗೆ ಮೊದ ಮೊದಲು ನಟನೆಗೆ ತುಂಬಾ ಅವಕಾಶಗಳು ಬರುತ್ತಿದ್ದವಂತೆ. ಆದರೆ ವಯಸ್ಸಾದ ಮೇಲೆ ಅವಕಾಶಗಳು ಕಡಿಮೆಯಾಗಿವೆ. ಆರ್ಥಿಕ ಸ್ಥಿತಿ ಹದಗೆಡಲಾರಂಭಿಸಿದೆ. ಆ ಕಾರಣದಿಂದಾಗಿ ಅವರು ಮುಂಬೈನಲ್ಲಿದ್ದ ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಗಾಯನವೂ ಗೊತ್ತಿದ್ದಿದ್ದರಿಂದ ಅದನ್ನೇ ಬಂಡವಾಳ ಮಾಡಿಕೊಂಡು, ರೆಸ್ಟೋರೆಂಟ್ ಒಂದರಲ್ಲಿ ಹಾಡು ಹೇಳುವ ಕೆಲಸ ಆರಂಭಿಸಿದ್ದಾರೆ. ಆದರೆ ಕಳೆದ ವರ್ಷದಿಂದ ಕರೊನಾ ಕಾರಣಕ್ಕೆ ಲಾಕ್ಡೌನ್ ಮಾಡುತ್ತಿರುವುದರಿಂದಾಗಿ ಅವರ ಕೆಲಸಕ್ಕೂ ಕತ್ತರಿ ಬಿದ್ದಿದೆ. ಕೂಡಿಟ್ಟುಕೊಂಡಿದ್ದ ಸಂಬಳ ಪೂರ್ತಿಯಾಗಿ ಖಾಲಿಯಾಗಿದೆ.
ಇದೀಗ ಮತ್ತೊಮ್ಮೆ ಮುಂಬೈ ಲಾಕ್ಡೌನ್ ಆಗಿರುವುದರಿಂದಾಗಿ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಕೆಲ ತಿಂಗಳಿಂದ ಮನೆ ಬಾಡಿಗೆ ಕಟ್ಟುವುದಕ್ಕೂ ಹಣವಿಲ್ಲದೆ ಒದ್ದಾಡುತ್ತಿರುವುದಾಗಿ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)