ಇದು ಆತ್ಮಹತ್ಯೆ!; ಶ್ರೀಕೃಷ್ಣನ ಕಣ್ಮರೆಯ ಬಗ್ಗೆ ಕೃಷ್ಣ ವ್ಯಾಖ್ಯಾನ

Darling Krishna
Published on

''ಶ್ರೀಕೃಷ್ಣ@ಜೀಮೇಲ್.ಕಾಮ್' ಒಂದೊಳ್ಳೆಯ ಕಾಮಿಡಿ ಎಂಟರ್​ಟೈನರ್ ಸಿನಿಮಾ. ನೋಡಿದ ಪ್ರೇಕ್ಷಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಎರಡು ದೊಡ್ಡ ಸಿನಿಮಾಗಳ ನಡುವೆ ಕಾಣದಂತಾಯ್ತು. ಇದಕ್ಕೆ ನಾವು ಸೂಸೈಡ್ ಎನ್ನಬಹುದು!’ ಹೀಗೆ ವಾಸ್ತವ ಸ್ಥಿತಿ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದರು ನಟ ‘ಡಾರ್ಲಿಂಗ್’ ಕೃಷ್ಣ.

ವಿಜಯದಶಮಿ ದಿನದಂದು ‘ಶ್ರೀಕೃಷ್ಣ@ಜೀಮೇಲ್.ಕಾಮ್ ಬಿಡುಗಡೆ ಆಗಲಿದೆ ಎಂದು ಘೋಷಣೆ ಮಾಡಿದ್ದರು ನಿರ್ವಪಕ ಸಂದೇಶ್ ನಾಗರಾಜ್. ಅದೇ ದಿನ ‘ಕೋಟಿಗೊಬ್ಬ-3’ ಮತ್ತು ‘ಸಲಗ’ ಚಿತ್ರಗಳು ಸಹ ಬಿಡುಗಡೆಯಾದವು. ಈ ಬೃಹತ್ ಅಲೆಗಳ ನಡುವೆ ‘ಶ್ರೀಕೃಷ್ಣ@ಜೀಮೇಲ್.ಕಾಮ್ ಕೊಚ್ಚಿಹೋಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಅದೀಗ ನಿಜವಾಗಿದೆ. ಚಿತ್ರ ಬಿಡುಗಡೆಯಾಗಿದ್ದೇ ಬಹಳಷ್ಟು ಜನರಿಗೆ ಗೊತ್ತಾಗಲಿಲ್ಲ. ಬಹುಶಃ ಒಂದಷ್ಟು ದಿನ ಬಿಟ್ಟು ಬಿಡುಗಡೆ ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬುದು ಕೃಷ್ಣ ಅವರ ಮಾತು.

‘ನನ್ನ ನಿರ್ಮಾಣದ ಸಿನಿಮಾ ಆಗಿದ್ದರೆ ನಾನು ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಆದರೂ ಕ್ಲಾಷ್ ಆಗುತ್ತಿದೆ ಎಂದು ನಿರ್ವಪಕರಿಗೆ ಹೇಳಿದ್ದೆ. ಅವರು ಅದಾಗಲೇ ಬಿಡುಗಡೆ ದಿನಾಂಕ ಘೋಷಿಸಿದ್ದರಿಂದ ಚಿತ್ರ ಬಿಡುಗಡೆ ಮಾಡಬೇಕಾಯಿತು. ದೊಡ್ಡ ಹೈಪ್ ಇರುವ ಎರಡು ಸಿನಿಮಾಗಳ ನಡುವೆ ಚಿತ್ರ ರಿಲೀಸ್ ಮಾಡಬಾರದಿತ್ತು. ಅದು ಆಗೋಗಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತಾದರೂ, ಸೋಲು-ಗೆಲುವು ಎಂಬುದಕ್ಕಿಂತ ಇದಕ್ಕೆ ಆತ್ಮಹತ್ಯೆ ಎನ್ನಬಹುದಷ್ಟೇ’ ಎಂಬುದು ಕೃಷ್ಣ ಮಾತು.

ವ್ಯಾವಹಾರಿಕ ಒಪ್ಪಂದ ಸರಿಹೊಂದಲಿಲ್ಲ ಅಷ್ಟೇ: ‘ಲವ್ ಮಾಕ್​ಟೇಲ್’ ಸಿನಿಮಾದಿಂದ ನನಗೆ ಸಂಭಾವನೆ ರೂಪದಲ್ಲಿ ಸಿಕ್ಕಿದ್ದು ಕೇವಲ 12 ಲಕ್ಷ ಮಾತ್ರ ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ 10 ಲಕ್ಷ ಸಂಭಾವನೆ ಕೇಳಿದ್ದರು. ಚಿತ್ರ ಗೆದ್ದು ಹೆಚ್ಚು ದುಡ್ಡು ಬಂದರೆ, ಇನ್ನೂ ನಾಲ್ಕು ಲಕ್ಷ ಕೊಡಿ ಎಂದಿದ್ದರು. ಅವರು ಹೇಳಿದ ಮೊತ್ತವನ್ನು ಕೊಡುವುದರ ಜತೆಗೆ, ಆಡಿಯೋ ಹಕ್ಕುಗಳನ್ನು ಉಚಿತವಾಗಿ ನೀಡಿದ್ದೇವೆ. ಹಾಡುಗಳು ರಘು ದೀಕ್ಷಿತ್ ಮ್ಯೂಸಿಕ್ ಚಾನಲ್​ನಲ್ಲಿ ಬಿಡುಗಡೆಯಾಗಿ, ಅದರಿಂದಲೇ ಅವರಿಗೆ 30 ಲಕ್ಷ ರೂ.ಗಳವರೆಗೂ ಬಂದಿದೆ. ಅದಾದ ಬಳಿಕ ಸೀಕ್ವೆಲ್ ಶುರುವಾದಾಗ 20 ಲಕ್ಷ ರೂ. ಕೇಳಿದರು. ಈ ಸಂಭಾವನೆ ಕೊಡುವುದಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಇದರ ಜತೆಗೆ ಅವರು ಉಚಿತವಾಗಿ ಆಡಿಯೋ ಹಕ್ಕುಗಳನ್ನೂ ಕೇಳಿದರು. ಈಗ ಆ ಆಡಿಯೋಕ್ಕೆ 32 ಲಕ್ಷ ರೂ ಮೌಲ್ಯ. ಸಂಭಾವನೆ ಪ್ಲಸ್ ಹಕ್ಕುಗಳ ಮೊತ್ತವನ್ನು ಸೇರಿಸಿದರೆ, 50 ಲಕ್ಷ ಕೊಟ್ಟಂತಾಗುತ್ತದೆ. ಎರಡರಲ್ಲಿ ಒಂದನ್ನು ಬಿಡುವುದಕ್ಕೆ ಕೇಳಿದೆ. ಆದರೆ, ಅವರು ಒಪ್ಪಲಿಲ್ಲ. ಎರಡೂ ಬೇಕೆಂದರು. ವ್ಯಾವಹಾರಿಕವಾಗಿ ಸರಿಹೊಂದದಿದ್ದರಿಂದ ಅವರನ್ನು ಬಿಟ್ಟು, ನಕುಲ್ ಅಭಯಂಕರ್ ಅವರನ್ನು ಆಯ್ಕೆ ಮಾಡಲಾಯಿತು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net