ನಿಮ್ಮಿಂದ ನಗಿಸಲು ಸಾಧ್ಯವಾಗದಿದ್ರೆ...ಗೆಳೆಯ ವೈಶಾಖ್​ ಸಾವಿನ ಬೆನ್ನಲ್ಲೇ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ! Krishi Thapanda

ನಿಮ್ಮಿಂದ ನಗಿಸಲು ಸಾಧ್ಯವಾಗದಿದ್ರೆ...ಗೆಳೆಯ ವೈಶಾಖ್​ ಸಾವಿನ ಬೆನ್ನಲ್ಲೇ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ! Krishi Thapanda
ನಿಮ್ಮಿಂದ ನಗಿಸಲು ಸಾಧ್ಯವಾಗದಿದ್ರೆ...ಗೆಳೆಯ ವೈಶಾಖ್​ ಸಾವಿನ ಬೆನ್ನಲ್ಲೇ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ! Krishi Thapanda
Published on

ಪ್ರಮುಖ ಮುಖ್ಯಾಂಶಗಳು

  • ಗೆಳೆಯ ವೈಶಾಕ್ ಸಾವಿಗೆ ನಟಿ ಕೃಷಿ ತಾಪಂಡ ಮೊದಲ ರಿಯಾಕ್ಷನ್
  • ನನ್ನ ಕಣ್ಣೀರಿಗೆ ನೀವೇ ಕಾರಣವಾಗಬೇಡಿ ಎಂದು ಭಾವುಕ ಪೋಸ್ಟ್
  • ಹೃದಯಕ್ಕೆ ಹತ್ತಿರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡೆ ಎಂದ ಕನ್ನಡ ನಟಿ
  • ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಮಾರ್ಮಿಕ ಸಂದೇಶ ನೀಡಿದ ನಟಿ ಕೃಷಿ ತಾಪಂಡ
Krishi Thapanda : ಉದ್ಯಮಿ ವೈಶಾಖ್ ಸಾವಿನ ಪ್ರಕರಣ ಸದ್ಯ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಪೊಲೀಸ್ ಇಲಾಖೆ ಈ ನಿಗೂಢ ಸಾವಿನ ಬೆನ್ನತ್ತಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದೆ. ಈ ಸೂಕ್ಷ್ಮ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಹೆಸರು ಕೂಡ ಪ್ರಸ್ತಾಪವಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸುತ್ತ ಕೇಳಿಬರುತ್ತಿರುವ ಹತ್ತಾರು ವದಂತಿಗಳು ಹಾಗೂ ಆಪ್ತ ಗೆಳೆಯನನ್ನು ಕಳೆದುಕೊಂಡ ತೀವ್ರ ದುಃಖದ ನಡುವೆ ನಟಿ ಕೃಷಿ ತಾಪಂಡ ಅವರು ಕೊನೆಗೂ ಮೌನ ಮುರಿದಿದ್ದು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಹಾಗೂ ಅತ್ಯಂತ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ತಮ್ಮ ಜೀವನದಲ್ಲಿ ಎದುರಾಗುತ್ತಿರುವ ದಿಢೀರ್ ಬೆಳವಣಿಗೆಗಳ ಬಗ್ಗೆ ಆತಂಕ ಹೊರಹಾಕಿರುವ ಕೃಷಿ ತಾಪಂಡ, ಕಳೆದ ಕೆಲವು ದಿನಗಳು ನಾನು ಎಂದಿಗೂ ಊಹಿಸದ ರೀತಿಯಲ್ಲಿ ಬದಲಾಗುತ್ತಿವೆ. ನನ್ನ ಜೀವನವನ್ನು ಈಗಾಗಲೇ ಸಾಕಷ್ಟೂ ವಿಚಾರಗಳು ಸಂಪೂರ್ಣವಾಗಿ ಬದಲಾಯಿಸಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೇ ಈಗ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ. ಯಾವಾಗಲೂ ನನ್ನ ಜೊತೆಗಿದ್ದು, ನನ್ನನ್ನು ರಕ್ಷಿಸಿ, ನನಗೆ ಧೈರ್ಯ ತುಂಬಿಸುತ್ತಿದ್ದ ಜೀವವದು. ಕೇವಲ ಅಪಾರವಾದ ಪ್ರೀತಿಯಿಂದ ಮಾತ್ರ ನನ್ನನ್ನು ನೋಡಿಕೊಂಡ ವ್ಯಕ್ತಿಯನ್ನು ಇಂದು ನಾನು ಕಳೆದುಕೊಂಡಿದ್ದೇನೆ ಎಂದು ತಮ್ಮ ಆಪ್ತ ಗೆಳೆಯ ವೈಶಾಖ್ ಅವರನ್ನು ನೆನೆದು ಕೃಷಿ ಕಣ್ಣೀರು ಹಾಕಿದ್ದಾರೆ.
ತಮ್ಮ ಆಪ್ತನ ಹಠಾತ್ ಅಗಲಿಕೆಯಿಂದ ಸೃಷ್ಟಿಯಾಗಿರುವ ಶೂನ್ಯವನ್ನು ತಡೆದುಕೊಳ್ಳಲು ತಮಗೆ ಸಾಧ್ಯವಾಗುತ್ತಿಲ್ಲ ಎಂದಿರುವ ನಟಿ, ಅವರನ್ನು ಕಳೆದುಕೊಂಡಿರುವುದು ಮಾತುಗಳಲ್ಲಿ ವಿವರಿಸಲಾಗದಷ್ಟು ದೊಡ್ಡ ನೋವು. ಈ ಭೀಕರ ನಷ್ಟವನ್ನು ಒಪ್ಪಿಕೊಂಡು ನಾನು ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವೇ? ಎನ್ನುವುದು ಸದ್ಯಕ್ಕೆ ನನಗೆ ತಿಳಿಯುತ್ತಿಲ್ಲ. ಏಕೆಂದರೆ ನಾನು ಈಗಾಗಲೇ ಬಹಳ ಸಮಯದಿಂದ ಒಂದಲ್ಲ ಒಂದು ನೋವನ್ನು ನನ್ನೊಳಗೆ ಹೊತ್ತುಕೊಂಡೇ ಸಾಗುತ್ತಿದ್ದೇನೆ. ಇಂತಹ ಸಂದರ್ಭದಲ್ಲೇ ಈಗ ನಾನು ಮತ್ತೊಂದು ಊಹಿಸಲೂ ಸಾಧ್ಯವಾಗದಂತಹ ದೊಡ್ಡ ನಷ್ಟವನ್ನು ಎದುರಿಸಬೇಕಾಗಿ ಬಂದಿದೆ ಎಂದು ತಮ್ಮ ಮನದ ಆಳದ ದುಃಖವನ್ನು ತೋಡಿಕೊಂಡಿದ್ದಾರೆ.
ಇದೇ ವೇಳೆ ತನಿಖೆ ಹಾಗೂ ಮಾಧ್ಯಮಗಳ ಸುದ್ದಿಗಳ ನಡುವೆ ತಮಗೆ ಕನಿಷ್ಠ ಗೌರವ ನೀಡಬೇಕು ಎಂದು ಮನವಿ ಮಾಡಿರುವ ಕೃಷಿ, ದಯವಿಟ್ಟು ಅರ್ಥ ಮಾಡಿಕೊಳ್ಳಿ, ಅವರ ಅಗಲಿಕೆಯಿಂದ ನಾನು ಸಾಕಷ್ಟು ನೋವಿನಲ್ಲಿದ್ದೇನೆ. ನನಗೆ ಶಾಂತಿಯಿಂದ ದುಃಖಿಸಲು ಕನಿಷ್ಠ ಗೌರವ ಮತ್ತು ವೈಯಕ್ತಿಕ ಗೌಪ್ಯತೆಯನ್ನು ನೀಡಿ ಎಂದು ವಿನಂತಿಸುತ್ತೇನೆ. ನಾವಿಲ್ಲಿ ಅತ್ಯಂತ ಕಠಿಣ ಸಂದರ್ಭವನ್ನು ಎದುರಿಸುತ್ತಿರುವುದರಿಂದ ನಮ್ಮ ಭಾವನೆಗಳಿಗೆ ಮತ್ತು ನಮ್ಮ ಪ್ರೈವೆಸಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಬೇಕಾಗಿದೆ ಎಂದು ಕೃಷಿ ಕೋರಿದ್ದಾರೆ.
ಕೊನೆಯದಾಗಿ ಸಮಾಜ ಹಾಗೂ ಹರಿದಾಡುತ್ತಿರುವ ವದಂತಿಗಳಿಗೆ ಮಾರ್ಮಿಕವಾಗಿ ಟಾಂಗ್ ನೀಡಿರುವ ಕೃಷಿ ತಾಪಂಡ, ನಿಮಗೆ ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ ಬೇಸರವಿಲ್ಲ, ಆದರೆ ಕನಿಷ್ಠ ಅವರ ಕಣ್ಣೀರಿಗೆ ನೀವೇ ನೇರ ಕಾರಣವಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಒಂದು ಹೊಸ ಕಾರಣವನ್ನು ಅಥವಾ ಭರವಸೆಯನ್ನು ನೀಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಅವರು ಬದುಕಿನ ಮೇಲಿಟ್ಟಿರುವ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಲು ನೀವೇ ಕಾರಣವಾಗಬೇಡಿ ಎಂದು ಬರೆಯುವ ಮೂಲಕ ಆತ್ಮೀಯ ಗೆಳೆಯ ವೈಶಾಖ್ ಅವರನ್ನು ಕಳೆದುಕೊಂಡ ನೋವಿನಲ್ಲೇ ಸಮಾಜಕ್ಕೆ ತಮ್ಮ ಮನವಿ ಮಾಡಿದ್ದಾರೆ.
ಅಂದಹಾಗೆ, ಉದ್ಯಮಿ ವೈಶಾಖ್ ಸಾವಿನ ಪ್ರಕರಣವು ಸದ್ಯ ತೀವ್ರ ರಹಸ್ಯ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದು, ಅವರ ಸಾವು ಆಕಸ್ಮಿಕವೇ ಅಥವಾ ಇದರ ಹಿಂದೆ ಬೇರೆನಾದರೂ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದೆ. ವೈಶಾಖ್ ಅವರ ಹಠಾತ್ ನಿಧನವು ಅವರ ಆಪ್ತ ವಲಯ ಹಾಗೂ ಕುಟುಂಬದಲ್ಲಿ ಭಾರಿ ಆಘಾತ ಸೃಷ್ಟಿಸಿದ್ದು, ಈ ನಿಗೂಢ ಸಾವಿನ ತನಿಖೆಯ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾಗಿವೆ. ಸದ್ಯ ಪೊಲೀಸರು ಮೃತರ ಮೊಬೈಲ್ ಕರೆಗಳ ವಿವರ, ಆರ್ಥಿಕ ವಹಿವಾಟುಗಳು ಹಾಗೂ ಸಾವಿಗೂ ಮುನ್ನ ನಡೆದ ಘಟನೆಗಳ ಆಧಾರದ ಮೇಲೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಸತ್ಯಾಸತ್ಯತೆಯನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net