

ಬೆಂಗಳೂರು: ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೃಂದಾ ಆಚಾರ್ಯ ಮತ್ತು ನಾಗಭೂಷಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’. ಕಳೆದ ಜು. 28ರಂದು ರಿಲೀಸ್ ಆದ ಚಿತ್ರಕ್ಕೆ ರಾಜ್ಯದ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸುಂದರ ಕೌಟುಂಬಿಕ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿರುವ ಚಿತ್ರಕ್ಕೆ ಮೂರನೇ ವಾರಕ್ಕೆ ಕಾಲಿಡುವ ಮುನ್ನವೇ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳು ಕೊಕ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಈ ವಾರ ತಮಿಳಿನಲ್ಲಿ ರಜಿನಿಕಾಂತ್ ನಟಿಸಿರುವ ‘ಜೈಲರ್’, ತೆಲುಗಿನಲ್ಲಿ ಚಿರಂಜೀವಿ ಅಭಿನಯದ ‘ಭೋಲಾ ಶಂಕರ್’, ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್ ನಟಿಸಿರುವ ‘ಗದರ್ 2’ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘ಓ ಮೈ ಗಾಡ್ 2’ ಹೀಗೆ ನಾಲ್ಕು ಪರಭಾಷಾ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗಾಗಿ ‘ಕೌಸಲ್ಯಾ ಸುಪ್ರಜಾ ರಾಮ’ ಶೋಗಳನ್ನು ಕಡಿಮೆ ಮಾಡುವ ಆತಂಕವಿದ್ದು, ಈ ಬಗ್ಗೆ ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿ ಜತೆ ಮಾತನಾಡಿ ನಮ್ಮ ಚಿತ್ರಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಕ ಶಶಾಂಕ್ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ನಿರ್ದೇಶಕ ಶಶಾಂಕ್, ‘ಎರಡನೇ ವಾರವೇ ನಾವು ನಿರೀಕ್ಷಿಸಿದಷ್ಟು ಶೋಗಳು ಸಿಗಲಿಲ್ಲ. ತೆಲುಗು, ಇಂಗ್ಲೀಷ್ ಚಿತ್ರಗಳು ಓಡುತ್ತಿವೆ ಎಂದು ಕಾರಣ ಹೇಳಿದರು. ಇದೀಗ ಪರಭಾಷಾ ಚಿತ್ರಗಳಿಗೆ ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲೂ 40ರಿಂದ 50 ಶೋಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಫಿಲಂ ಚೇಂಬರ್‌ನಲ್ಲಿ ಮನವಿ ಮಾಡಿದ್ದೇವೆ. ಇದರ ಬಳಿಕವೂ ಕನ್ನಡ ಸಿನಿಮಾ ಶೋಗಳನ್ನು ಕಡಿಮೆ ಮಾಡಿದರೆ, ಕನ್ನಡ ಸಂಘಟನೆಗಳ ಜತೆ ರಸ್ತೆಗಿಳಿದು ಹೋರಾಡಲೂ ಹಿಂಜರಿಯುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ, ನಾಯಕ
ಚೆನ್ನಾಗಿ ಹೋಗುತ್ತಿರುವ ಸಿನಿಮಾಗಳ ಶೋಗಳನ್ನು ಹಠಾತ್ ಕಡಿಮೆ ಮಾಡುವುದು ಸರಿಯಲ್ಲ. ಒಂದು ಮಲ್ಟಿಪ್ಲೆಕ್ಸ್‌ನವರು 26, ಮತ್ತೊಬ್ಬರು 18, ಇನ್ನೊಬ್ಬರು 20 ಶೋಗಳನ್ನು ನೀಡಿದ್ದಾರೆ. ನಮ್ಮ ಚಿತ್ರಕ್ಕೆ ಕೆಲವರು ಬೆಳಗ್ಗೆ 9.55ಕ್ಕೆ ಶೋ ಸಮಯ ನಿಗದಿ ಮಾಡಿದ್ದಾರೆ. ಕೋರಮಂಗಲದಲ್ಲಿ ಕನ್ನಡ ಸಿನಿಮಾ ನೋಡುವ ಪ್ರೇಕ್ಷಕರಿಲ್ಲವೇ? ಮಲ್ಟಿಪ್ಲೆಕ್ಸ್‌ಗಳವರು ಇನ್ನಾದರೂ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡಬೇಕು’