ಫೆ.4ಕ್ಕೆ ತೆಲುಗಿನಲ್ಲಿ ಕೋಟಿಗೊಬ್ಬ-3: 18ಕ್ಕೆ ಟಾಲಿವುಡ್​ಗೆ ಬಡವ ರಾಸ್ಕಲ್?

Kotigobba 3
Published on

ಬೆಂಗಳೂರು: ‘ಕಿಚ್ಚ’ ಸುದೀಪ್ ನಟನೆಯ ’ಕೋಟಿಗೊಬ್ಬ 3’ ಸಿನಿಮಾ ಕಳೆದ ವರ್ಷದ ಅಕ್ಟೋಬರ್​ನಲ್ಲೇ ತೆರೆಗೆ ಬಂದಿತ್ತು. ಚಿತ್ರವು ತೆಲುಗಿಗೂ ಡಬ್ ಆಗಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಕನ್ನಡ ಅವತರಣಿಕೆ ಮಾತ್ರವೇ ಬಿಡುಗಡೆ ಆಯಿತೇ ವಿನಃ, ತೆಲುಗು ಬಿಡುಗಡೆ ಆಗಲೇ ಇಲ್ಲ. ಇದೀಗ ಮೂರು ತಿಂಗಳ ಬಳಿಕ ‘ಕೋಟಿಕೊಕ್ಕುಡು-3’ ರೂಪದಲ್ಲಿ ಫೆ. 4ರಂದು ತೆಲುಗು ನಾಡಿನಲ್ಲಿ ಬಿಡುಗಡೆ ಆಗಲಿದ್ದು, ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ಪೋಸ್ಟರ್ ಮೂಲಕ ಹೇಳಿಕೊಂಡಿದೆ.

ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಸುದೀಪ್​ಗೆ ಜತೆಯಾಗಿ ಮಡೋನಾ ಸೆಬಾಸ್ಟಿಯನ್ ಜತೆಯಾಗಿದ್ದು, ಇನ್ನುಳಿದಂತೆ ಶ್ರದ್ಧಾ ದಾಸ್, ರವಿ ಶಂಕರ್, ನವಾಬ್ ಶಾ ಸೇರಿ ಹಲವು ಪಾತ್ರವರ್ಗದಲ್ಲಿದ್ದಾರೆ. ಈಗಾಗಲೇ ಅಮೆಜಾನ್ ಪ್ರೖೆಂನಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದ್ದು, ಇತ್ತೀಚೆಗೆ ಕಿರುತೆರೆಯಲ್ಲೂ ಪ್ರದರ್ಶನ ಕಂಡಿದೆ.

ಫೆ.18ಕ್ಕೆ ಟಾಲಿವುಡ್​ಗೆ ಬಡವ ರಾಸ್ಕಲ್?: ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಚಿತ್ರ ಇದೀಗ ಪಕ್ಕದ ಟಾಲಿವುಡ್​ಗೂ ಹೊರಟು ನಿಂತಿದೆ. ‘ಪುಷ್ಪ’ ಸಿನಿಮಾದಲ್ಲಿ ಜಾಲಿರೆಡ್ಡಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡೇ ತೆಲುಗು ಡಬ್ಬಿಂಗ್ ಅವತರಣಿಕೆಯನ್ನು ಬಿಡುಗಡೆ ಮಾಡಲು ತಂಡ ಪ್ಲಾನ್ ನಡೆಸಿದೆ. ಈಗಾಗಲೇ ಡಬ್ಬಿಂಗ್ ಕೆಲಸ ಮುಗಿದಿದ್ದು, ಸೆನ್ಸಾರ್​ನಿಂದಲೂ ‘ಯೂ/ಎ’ ಪ್ರಮಾಣ ಪತ್ರ ಸಿಕ್ಕಿದೆ. ಇದೇ ಫೆ. 18ಕ್ಕೆ ಚಿತ್ರವನ್ನು ಅಲ್ಲಿ ತೆರೆಗೆ ತರುವ ಯೋಚನೆ ತಂಡದ್ದಾಗಿದ್ದು, ಶೀಘ್ರದಲ್ಲಿ ಅಧಿಕೃತ ಘೋಷಣೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net