

ಬೆಂಗಳೂರು: ಅನಿಶ್ಚಿತತೆಯಲ್ಲಿಯೇ ಜೀವಿಸುತ್ತಿದ್ದ ಚಿತ್ರೋದ್ಯಮಕ್ಕೀಗ ಚೇತರಿಕೆ ಸಿಕ್ಕಂತಾಗಿದೆ. ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಸ್ಟಾರ್ ನಟರು ಚಿತ್ರಮಂದಿರಗಳಿಗೆ ಬರುವ ಸೂಚನೆ ನೀಡಿದ್ದಾರೆ. ಬಿಡುಗಡೆ ದಿನಾಂಕ ಘೋಷಿಸಿ ಅಭಿಮಾನಿಗಳಿಗೆ ಸರ್ಪ್ರೖೆಸ್ ನೀಡಿದ್ದಾರೆ. ಹಾಗಾದರೆ, ಯಾವೆಲ್ಲ ಸಿನಿಮಾಗಳು ರಿಲೀಸ್ ಸರತಿಯಲ್ಲಿವೆ? ಅದಕ್ಕುತ್ತರ ಇಲ್ಲಿದೆ.
ಅ.8ಕ್ಕೆ ನಿನ್ನ ಸನಿಹಕೆ: ಶೇ. 100 ಆಸನ ಭರ್ತಿಗೆ ಅನುಮತಿ ಸಿಗುತ್ತಿದ್ದಂತೆ ಮೊದಲು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ ಸಿನಿಮಾ ಎಂದರೆ, ಅದು ‘ನಿನ್ನ ಸನಿಹಕೆ’. ಡಾ. ರಾಜ್ ಮೊಮ್ಮಗಳು ಧನ್ಯಾ ಹಾಗೂ ಸೂರಜ್ ಗೌಡ ನಟಿಸಿರುವ ಈ ಚಿತ್ರ ಅ. 8ಕ್ಕೆ ಬಿಡುಗಡೆ ಆಗುತ್ತಿದೆ.
ಅ. 14ರಂದು ಕೋಟಿಗೊಬ್ಬ 3 ಮತ್ತು ಸಲಗ: ‘ಕಿಚ್ಚ’ ಸುದೀಪ್ ನಟಿಸಿರುವ ‘ಕೋಟಿಗೊಬ್ಬ-3’ ಚಿತ್ರ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿದೆ ಎಂಬ ಗುಸುಗುಸು ಇತ್ತು. ಅದೀಗ ಅಧಿಕೃತವಾಗಿದ್ದು, ಅ.14ರಂದು ಚಿತ್ರ ತೆರೆಗೆ ಬರಲಿದೆ. ಶಿವಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಅದೇ ದಿನ ‘ದುನಿಯಾ’ ವಿಜಯ್ ಅಭಿನಯದ ‘ಸಲಗ’ ಚಿತ್ರ ಸಹ ಬಿಡುಗಡೆ ಆಗುತ್ತಿರುವುದರಿಂದ ಸಹಜವಾಗಿ ದೊಡ್ಡ ಸಿನಿಮಾಗಳ ನಡುವೆ ಕ್ಲ್ಯಾಷ್ ಏರ್ಪಡಲಿದೆ. ಈ ಬಗ್ಗೆ ಮಾಹಿತಿ ನೀಡುವ ನಿರ್ವಪಕ ಕೆ.ಪಿ. ಶ್ರೀಕಾಂತ್, ‘ಸರ್ಕಾರದಿಂದ ಪೂರ್ಣ ಆಸನ ಭರ್ತಿಗೆ ಅವಕಾಶ ಸಿಕ್ಕಿದೆ. ಹಾಗಾಗಿ, ಅ.14ರಂದು ‘ಸಲಗ’ ತೆರೆಗೆ ಬರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದಿದ್ದಾರೆ.
ಅ. 29ಕ್ಕೆ ‘ಭಜರಂಗಿ 2’: ಗಣೇಶ ಚೌತಿಗೆ ಬರುವುದಾಗಿ ಹೇಳಿದ್ದ ಶಿವರಾಜಕುಮಾರ್ ನಟನೆಯ ‘ಭಜರಂಗಿ2’ ಸಿನಿಮಾ ಅ.29ಕ್ಕೆ ದಿನಾಂಕ ಫಿಕ್ಸ್ ಮಾಡಿದೆ. ಹರ್ಷ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ಜಯಣ್ಣ ಕಂಬೈನ್ಸ್ ಅಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ವಿುಸಿದ್ದಾರೆ. ಸದ್ಯಕ್ಕೆ ಈ ನಾಲ್ಕು ಚಿತ್ರಗಳ ಬಿಡುಗಡೆ ಅಧಿಕೃತವಾಗಿ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.