

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಕೋಟ್ಯಂತರ ಜನ ಹೋಗುತ್ತಿದ್ದಾರೆ. ಅದರಿಂದ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಕನ್ನಡ ಸೇರಿ ವಿವಿಧ ಚಿತ್ರರಂಗಗಳ ನೂರಾರು ತಾರೆಯರು ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಇತ್ತೀಚೆಗಷ್ಟೆ "ಕೊರಗಜ್ಜ' ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್, ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಗಂಗೆ, ಯಮುನಾ, ಸರಸ್ವತಿ ನದಿಗಳು ಸೇರುವ ತ್ರಿವೇಶನಿ ಸಂಗಮದಲ್ಲಿ ಮಿಂದೆದ್ದು, "ಕೊರಗಜ್ಜ' ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ "ಕಾಂತಾರ', "ಪುಷ್ಪ' ಚಿತ್ರಗಳು ದೇಶಾದ್ಯಂತ ಸುದ್ದಿಯಾಗಿವೆ. ಅದೇ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ "ಕೊರಗಜ್ಜ' ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಉತ್ತರ ಭಾರತದ ಪ್ರೇಕ್ಷಕರಲ್ಲೂ ಕುತೂಹಲವಿದೆ.
ಹಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಹೆಸರಾಂತ ಬಾಲಿವುಡ್ ನಟ ಕಬೀರ್ ಬೇಡಿ, ಅಂತಾರಾಷ್ಟ್ರೀಯ ನೃತ್ಯ ನಿರ್ದೇಶಕ ಸಂದೀಪ್ ಸೊಪರ್ಕರ್, ಹಿರಿಯ ನಟಿ ಭವ್ಯ, ನವೀನ್ ಪಡೀಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. 800 ವರ್ಷಗಳ ಹಿಂದೆ ಅರ್ಥಾತ್ 12ನೇ ಶತಮಾನದಲ್ಲಿ "ಕೊರಗಜ್ಜ'ನ ಕುರಿತ ಕಥೆ ಹೇಳುವ ಪ್ರಯತ್ನ ಚಿತ್ರತಂಡದ್ದು.