'ಕಾಲಾಯ ನಮಃ' ಎನ್ನುತ್ತಿದ್ದಾರೆ ಕೋಮಲ್​; ಹೊಸ ಚಿತ್ರದಲ್ಲಿ ನಟನೆ

Kalaya Namaha
Published on

ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಕೋಮಲ್​ ನಟಿಸಿದ್ದು ಬಹಳ ಕಡಿಮೆ. 'ಕೆಂಪೇಗೌಡ 2' ನಂತರ ದೊಡ್ಡ ಬ್ರೇಕ್​ ತೆಗೆದುಕೊಂಡಿದ್ದ ಕೋಮಲ್​, ಆ ನಂತರ '2020' ಎಂಬ ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್ಸಾದರು. ಆ ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನವೇ ಅವರು, ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ 'ಕಾಲಾಯ ನಮಃ'.

ವಿಶೇಷವೆಂದರೆ, ಈ ಚಿತ್ರವನ್ನು ಕೋಮಲ್​ ಅವರ ಪತ್ನಿ ಅನುಸೂಯ ಕೋಮಲ್​ ನಿರ್ಮಿಸುತ್ತಿದ್ದಾರೆ. ಮತಿವಣ್ಣನ್​ ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೋಮಲ್​ಗೆ ನಾಯಕಿಯಾಗಿ 'ಕನ್ಯಾಕುಮಾರಿ' ಧಾರಾವಾಹಿ ಖ್ಯಾತಿಯ ಆಸಿಯಾ ಫಿರ್ದೌಸ್​ ನಟಿಸುತ್ತಿದ್ದಾರೆ. ಮಿಕ್ಕಂತೆ ತಿಲಕ್​, ಯತಿರಾಜ್​, ಸುಚೇಂದ್ರ ಪ್ರಸಾದ್​ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಹೊಸ ಚಿತ್ರದ ಕುರಿತು ಮಾತನಾಡುವ ಕೋಮಲ್​, 'ಬಹಳ ದಿನಗಳ ನಂತರ ನಿರ್ಮಾಣ ಮತ್ತು ನಟನೆಗೆ ವಾಪಸ್ಸಾಗಿದ್ದೇನೆ. ನಾವು ಈಗ ಮಾಡುತ್ತಿರುವ ಚಿತ್ರ ಸಮಯಕ್ಕೆ ಕುರಿತಾದ ಚಿತ್ರವಾಗಿದೆ. ಸಮಯ ಯಾರ ಮಾತೂ ಕೇಳುವುದಿಲ್ಲ. ಯಾವಾಗ ಏನಾಗಬೇಕೋ ಅದೇ ಆಗುತ್ತದೆ. ನಾನು ಅಭಿನಯ ಮಾಡಿ ಬಹಳ ಸಮಯ ಆಯ್ತು ಎಂದು ಎಲ್ಲರೂ ಹೇಳುತ್ತಿದ್ದರು. ಇದಕ್ಕೂ ಸಮಯ ಕೂಡಿ ಬರಬೇಕಿತ್ತು. ಈಗ ಬಂದಿದೆ' ಎನ್ನುತ್ತಾರೆ ಕೋಮಲ್​.

ಮತಿವಣ್ಣನ್​​ ಅವರನ್ನು ನಿರ್ದೇಶಕರನ್ನಾಗಿ ಮಾಡುತ್ತೇನೆ ಎಂದು ಕೋಮಲ್​ ಕೆಲವು ವರ್ಷಗಳ ಹಿಂದೆಯೇ ಪ್ರಾಮಿಸ್​ ಮಾಡಿದ್ದರಂತೆ. ಈ ಕುರಿತು ಮಾತನಾಡುವ ಅವರು, 'ನನ್ನನ್ನು ತಮಿಳಿಗೆ ಪರಿಚಯಿಸುವುದಕ್ಕೆ ಆರ್.ಎಸ್​. ಇನ್ಫೋಟೇನ್​ಮೆಂಟ್​ ಎಂಬ ಸಂಸ್ಥೆ ತಯಾರಿ ನಡೆಸಿತ್ತು. ಆ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಮತಿವಣ್ಣನ್​ ನನ್ನನ್ನು ಆಡಿಷನ್​ ಮಾಡಿದರು. ಬಹಳ ವಿಭಿನ್ನವಾಗಿ ಮಾಡಿದ್ದರು. ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಅವರು ತುಂಬಾ ಪ್ರತಿಭಾವಂತರಾದ್ದರಿಂದ, ಅವರಿಗೆ ಪ್ರಾಮಿಸ್​ ಮಾಡಿದ್ದೆ. ನಿಮ್ಮ ಜತೆಗೆ ಸಿನಿಮಾ ಮಾಡುತ್ತೀನಿ ಎಂದು ಹೇಳಿದ್ದೆ. ಅದರಂತೆ ಅವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ' ಎನ್ನುತ್ತಾರೆ ಕೋಮಲ್​.

ಮುಂದಿನ ದಿನಗಳಲ್ಲಿ ಕೋಮಲ್​ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾರಂತೆ. ''2020' ಚಿತ್ರವು ಇದೇ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ. ಜತೆಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇನೆ' ಎನ್ನುತ್ತಾರೆ ಕೋಮಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net