ಕ್ಯಾನ್ಸರ್ ಚಿಕಿತ್ಸೆಯ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಕಿರಣ್ ಖೇರ್

Kiron Kher - Final
Published on

ಮುಂಬೈ: ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ನಟಿ ಮತ್ತು ಸಂಸದೆ ಕಿರಣ್​ ಖೇರ್​ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಶನಿವಾರ, ತಮ್ಮ ಪತಿ ಅನುಪಮ್​ ಖೇರ್ ಜತೆಗೆ ಅವರು ಕೋವಿಡ್​ ಲಸಿಕೆ ಪಡೆದಿದ್ದಾರೆ.

ಕಿರಣ್​ ಖೇರ್​ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ ಅವರಿಗೆ ಏನಾಗಿದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಅವರಿಗೆ ಬ್ಲಡ್​ ಕ್ಯಾನ್ಸರ್​ ಆಗಿದ್ದು, ಅದರಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತಿ ಮತ್ತು ನಟ ಅನುಪಮ್​ ಖೇರ್​ ಹೇಳಿದ್ದರು.

ಆದರೂ ಕಿರಣ್​ ಖೇತ್​ ಅವರು ಕಳೆದ ಒಂದು ವರ್ಷದಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಕಾರಣ, ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿತ್ತು. ಅಷ್ಟೇ ಅಲ್ಲ, ಕ್ಯಾನ್ಸರ್​ನಿಂದ ಇನ್ನು ಅವರು ಚೇತರಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗಿತ್ತು. ಹೀಗಿರುವಾಗಲೇ, ಕಿರಣ್​ ಖೇರ್​ ಸಾರ್ವಜನಿಕವಾಗಿ ಕಾಣಿಸಿಕೊಂಡು ಆ ವದಂತಿಗಳನ್ನು ಸುಳ್ಳಾಗಿಸಿದ್ದಾರೆ.

ತಮ್ಮ ಪತ್ನಿ ಕಿರಣ್​ ಆರೋಗ್ಯಕರವಾಗಿದ್ದು, ಆಕೆಯ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ ಎಂದು ಅನುಪಮ್​ ಖೇರ್​ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿರುವ ಅವರು, ಕಿರಣ್ ಅವರ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹಬ್ಬಿವೆ. ಆಕೆ ಆರೋಗ್ಯವಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಎರಡನೆಯ ಲಸಿಕೆಯನ್ನೂ ಪಡೆದಿದ್ದಾರೆ. ದಯವಿಟ್ಟು ಆಕೆಯ ಆರೋಗ್ಯದ ವಿಚಾರವಾಗಿ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅನುಪಮ್​ ಖೇರ್ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net