

ಮುಂಬೈ: ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಬಚ್ಚನ್ ಅವರ ಕಾಲೆಳೆಯುವವರೇ ಹೆಚ್ಚು. ಜನ ಅಭಿಷೇಕ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಮತ್ತು ಅಭಿಷೇಕ್ ಸಹ ಅದನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸುವುದರ ಜತೆಗೆ, ಆ ಎಲ್ಲ ಮಾತುಗಳಿಗೆ ತಮ್ಮದೇ ರೀತಿಯಲ್ಲಿ ಉತ್ತರ ಕೊಡುತ್ತಿರುತ್ತಾರೆ.
ಬಹಳ ಅಪರೂಪಕ್ಕೆ, ಅಭಿಷೇಕ್ ಬಚ್ಚನ್ ಅವರನ್ನು ಮೆಚ್ಚಿಕೊಂಡು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ನಿತಿನ್ ಮಂಚಂದಾ ಎನ್ನುವವರು, ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಅವರನ್ನು ಮೆಚ್ಚಿಕೊಂಡು ಪೋಸ್ಟ್ ಹಾಕುವುದರ ಜತೆಗೆ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗೆ ಬಿಗ್ಬುಲ್ ನೋಡಿದೆ. ನಟನೆಯ ವಿಷಯಕ್ಕೆ ಬಂದರೆ, ನೀವು ನಿಮ್ಮಪ್ಪನಿಗಿಂತ ಸೂಪರ್. ಸದಾ ಚೆನ್ನಾಗಿರಿ ಗುರು ಭಾಯ್ ಎಂದು ಅಭಿಷೇಕ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೆ, ಅಭಿನಯದ ವಿಷಯಕ್ಕೆ ಬಂದರೆ ನಮ್ಮಪ್ಪನನ್ನು ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಅಭಿಷೇಕ್ ಅವರ ಈ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ಅಭಿಮಾನಿಗಳು, ಇದಕ್ಕಿಂತ ಇನ್ನೇನು ಬೇಕು, ಇದಕ್ಕಿಂತ ಇನ್ನೊಂದು ಅದ್ಭುತವಾದ ಕಾಂಪ್ಲಿಮೆಂಟ್ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಅಮಿತಾಭ್ ಬಚ್ಚನ್ ಅವರನ್ನು ಅಭಿನಯದ ವಿಷಯದಲ್ಲಿ ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಗೊತ್ತಿದೆ. ಆದರೆ, ನೀವು ಸಹ ನಿಮ್ಮ ತಂದೆಯ ಹಾದಿಯಲ್ಲಿ ನಡೆಯುತ್ತಿರುವ ವಿಷಯ ಬಹಳ ಖುಷಿಕೊಟ್ಟಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕರೊನಾ ಗೆದ್ದರು ಪವರ್ ಸ್ಟಾರ್ ಪವನ್ ಕಲ್ಯಾಣ್
ಬಿಗ್ಬುಲ್ ಚಿತ್ರವು ಏಪ್ರಿಲ್ನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅಜಯ್ ದೇವಗನ್ ನಿರ್ಮಾಣದ ಈ ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ನಂತರ ದಸ್ವಿ ಎಂಬ ಚಿತ್ರದಲ್ಲಿ ಅಭಿಷೇಕ್ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.