

ಹೈದರಾಬಾದ್: ಕಿಯಾರಾ ಅಡ್ವಾಣಿಗೆ ಬಾಲಿವುಡ್ನಲ್ಲಿ ಅದೆಷ್ಟು ಬೇಡಿಕೆ ಇದೆಯೋ, ಟಾಲಿವುಡ್ನಲ್ಲೂ ಅಷ್ಟೇ ಬೇಡಿಕೆ ಇದೆ. ಆದರೆ, ಕಿಯಾರಾ ಮಾತ್ರ ಟಾಲಿವುಡ್ಗಳಿಂದ, ಬಾಲಿವುಡ್ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು. ಅಲ್ಲಿ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರು. ಈಗ ಬಹಳ ದಿನಗಳ ನಂತರ ಅವರೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಇದೆ.
ಹೌದು, ಬಹಳ ದಿನಗಳ ನಂತರ ಟಾಲಿವುಡ್ನ ಚಿತ್ರವೊಂದರಲ್ಲಿ ಕಿಯಾರಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಎನ್ಟಿಆರ್ ಅಭಿನಯದಲ್ಲಿ ಕೊರಟಾಲ ಶಿವ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಕಿಯಾರಾ ನಾಯಕಿಯಾಗುವುದಕ್ಕೆ ಒಪ್ಪಿಕೊಂಡಿದ್ದಾರಂತೆ.
ಇಷ್ಟು ದಿನ ಹಲವರು ಪ್ರಯತ್ನಪಟ್ಟರೂ ಕಿಯಾರಾ ಅವರನ್ನು ತೆಲುಗು ಚಿತ್ರರಂಗಕ್ಕೆ ಮತ್ತೊಮ್ಮೆ ಕರೆತರುವುದಕ್ಕೆ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಕಿಯಾರಾ ತಮಗೆ ಸಂಭಾವನೆಯಾಗಿ ಮೂರು ಕೋಟಿ ಕೊಡಬೇಕು ಎಂದು ಕೇಳಿ ಎಲ್ಲರೂ ಹೌಹಾರುತ್ತಿದ್ದರು. ಅದೇ ಕಾರಣಕ್ಕೆ, ಕಳೆದ ಎರಡು ವರ್ಷಗಳಲ್ಲಿ ಕಿಯಾರಾ ಒಂದು ಡಜನ್ ಚಿತ್ರಗಳನ್ನು ಕೈಬಿಟ್ಟಿದ್ದರು.
ಹೀಗೆ ಸಿಕ್ಕ ಅವಕಾಶಗಳನ್ನು ಬೇಡ ಎನ್ನುತ್ತಿದ್ದ ಕಿಯಾರಾ ಈ ಬಾರಿ ಒಪ್ಪಿದ್ದು ಹೇಗೆ ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ಕಿಯಾರಾ ಅವರನ್ನು ತೆಲುಗು ಚಿತ್ರರಂಗಕ್ಕೆ ಮೊದಲಿಗೆ ಕರೆತಂದಿದ್ದು ಅದೇ ಕೊರಟಾಲ ಶಿವ. ಭರತ್ ಅನೇ ನೇನು ಎಂಬ ಮಹೇಶ್ ಬಾಬು ಚಿತ್ರದಲ್ಲಿ ಕಿಯಾರಾಗೆ ಅವಕಾಶ ಕೊಟ್ಟಿದ್ದರು ಶಿವ. ಈಗ ಅದೇ ಶಿವ ತಮ್ಮ ಮುಂದಿನ ಚಿತ್ರದಲ್ಲಿ ನಟಿಸಬೇಕು ಎಂದು ಕೇಳಿದ್ದಿಕ್ಕೆ, ಅವರ ಮೇಲಿನ ಗೌರವಕ್ಕೆ ಕಟ್ಟುಬಿದ್ದು ಕಿಯಾರಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗು ಚಿತ್ರದಲ್ಲಿ ನಟಿಸುವುದಕ್ಕೆ ಕಿಯಾರಾ ಒಪ್ಪಿಕೊಂಡಿದ್ದರೂ, ಈ ಕುರಿತಾಗಿ ಅಧಿಕೃತ ಘೋಷಣೆಯಾಗಿಲ್ಲ. ಮೇ 20ಕ್ಕೆ ಜ್ಯೂನಿಯರ್ ಎನ್ಟಿಆರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ಚಿತ್ರದ ಬಗ್ಗೆ ಮತ್ತು ಉಳಿದ ಕಲಾವಿದರ ಬಗ್ಗೆ ಅಧಿಕೃತ ಘೋಷಣೆಯಾಗಲಿದೆಯಂತೆ.