

ಚೆನ್ನೈ: ಕಾಲಿವುಡ್ ಇಂಡಸ್ಟ್ರಿಯಲ್ಲಿ ನಟ ಜಯಂ ರವಿಗೆ ವಿಶೇಷವಾದ ಐಡೆಂಟಿಟಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಜಯಂ ರವಿ ಕೂಡ ಒಬ್ಬರು. ಇತ್ತೀಚೆಗಷ್ಟೇ ತಮ್ಮ ಪತ್ನಿ ಆರತಿಗೆ ವಿಚ್ಛೇದನ ಘೋಷಣೆ ಮಾಡಿದರು. ಈ ಸುದ್ದಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೆಲ ದಿನಗಳ ಹಿಂದಷ್ಟೇ ಜಯಂ ರವಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್ ಖಚಿತಪಡಿಸಿದರು. ಇದರ ಬೆನ್ನಲ್ಲೇ ಆರತಿ ಕೂಡ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ರವಿ ವಿರುದ್ಧ ಅಸಮಾಧಾನ ಹೊರಹಾಕಿದರು. ಏಕಪಕ್ಷೀಯವಾಗಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದರು. ಇದರ ನಡುವೆ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಮಾಡಿರುವ ಟ್ವೀಟ್ ಒಂದು ಭಾರೀ ವೈರಲ್ ಆಗುತ್ತಿದೆ.
ಸಮಾಜದಲ್ಲಿ ತನ್ನ ಕುಟುಂಬವನ್ನು ಉನ್ನತ ಮಟ್ಟದಲ್ಲಿ ಇರಿಸಲು ಬಯಸುವ ವ್ಯಕ್ತಿಯು ತನ್ನ ಪ್ರೀತಿಪಾತ್ರರ ಬೇಕು-ಬೇಡಗಳನ್ನು ಪೂರೈಸಲು ಸದಾ ಪ್ರಯತ್ನಿಸುತ್ತಾನೆ. ದಾಂಪತ್ಯದಲ್ಲಿ ಏರಿಳಿತಗಳಿರುವುದು ಸಹಜ, ಸಣ್ಣಪುಟ್ಟ ತಪ್ಪುಗಳು ಆಗುತ್ತವೆ. ಅಷ್ಟಕ್ಕೆ ಸಂಬಂಧವನ್ನು ಬಿಟ್ಟುಕೊಡುವುದು ಸರಿಯಲ್ಲ. ಕಾಲಕಾಲಕ್ಕೆ ಪ್ರೀತಿ ಮಂಕಾಗಬಹುದು. ಆದರೆ, ಗೌರವ ಮತ್ತು ಸಭ್ಯತೆ ಸದಾ ಉಳಿಯಬೇಕು. ಗಂಡ ಆದವನು ತನ್ನ ಹೆಂಡತಿಗೆ ಸರಿಯಾದ ಗೌರವ ನೀಡಬೇಕು ಎಂದು ಖುಷ್ಬೂ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಒಬ್ಬ ಸ್ವಾರ್ಥಿ ತನ್ನ ನಡೆಗಳಿಂದ ಇತರರ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇಂತಹ ನಡವಳಿಕೆಯು ಕುಟುಂಬದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಅದು ತಡವಾಗಬಹುದು ಆದರೆ, ಖಂಡಿತ ನಡದೇ ನಡೆಯುತ್ತದೆ ಎಂದು ಖುಷ್ಬೂ ಹೇಳಿದರು.
ಹೆಂಡತಿಯನ್ನು ಗೌರವಿಸಲಾಗದ ವ್ಯಕ್ತಿ ಜೀವನದಲ್ಲಿ ಎಂದಿಗೂ ಬೆಳೆಯುವುದಿಲ್ಲ. ನಿಮ್ಮನ್ನು ಪ್ರೀತಿಸಿದ ಮತ್ತು ನಿಮ್ಮ ಬೆಂಬಲಕ್ಕೆ ನಿಂತ ವ್ಯಕ್ತಿಯನ್ನು ಅಗೌರವಗೊಳಿಸುವುದು ನೋವಿನ ಸಂಗತಿಯಾಗಿದೆ. ಸಂಸಾರದಲ್ಲಿ ಗೌರವ ಇರಬೇಕು ಎಂಬುದನ್ನು ಮರೆಯುವ ವ್ಯಕ್ತಿ ಪ್ರೀತಿಗಿಂತ ಅಮೂಲ್ಯವಾದ ಬಾಂಧವ್ಯವನ್ನು ಕಳೆದುಕೊಂಡು ನಿಜವಾದ ನೋವನ್ನು ಅನುಭವಿಸುತ್ತಾನೆ ಎಂದು ಖುಷ್ಬೂ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಖುಷ್ಬೂ ಅವರು ಎಲ್ಲಿಯೂ ಜಯಂ ರವಿ ಹೆಸರನ್ನು ಉಲ್ಲೇಖಿಸದೇ ಇದ್ದರೂ ಇದು ಜಯಂ ರವಿ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖುಷ್ಬೂ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಖುಷ್ಬೂ ಅವರ ಟ್ವೀಟ್ ಭಾರಿ ಚರ್ಚೆಯಾಗುತ್ತಿದೆ. ಈ ಡಿವೋರ್ಸ್ ಪ್ರಕರಣದಲ್ಲಿ ಗಾಯಕಿ ಕೆನೀಶಾ ಹೆಸರು ಕೇಳಿಬರುತ್ತಿದ್ದು, ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.
ಆರತಿ ಬರೆದ ಪತ್ರದಲ್ಲಿ ಏನಿತ್ತು?
ನನ್ನ ಗಮನಕ್ಕೆ ತರದೆ ಅಥವಾ ಒಪ್ಪಿಗೆಯಿಲ್ಲದೆ ನಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿಗೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಿಂದ ನಾನು ಆಘಾತಕ್ಕೆ ತೀವ್ರ ಒಳಗಾಗಿದ್ದೇನೆ ಮತ್ತು ದುಃಖಿತಳಾಗಿದ್ದೇನೆ. 18 ವರ್ಷಗಳ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ತುಂಬಾ ಗೌರವಯುತವಾಗಿ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕೆಂದು ನಾನು ನಂಬುತ್ತೇನೆ. ನಾನು ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ದುರದೃಷ್ಟವಶಾತ್, ನನಗೆ ಆ ಅವಕಾಶ ಸಿಗಲಿಲ್ಲ. ಇದೀಗ ಈ ಡಿಢೀರ್ ಡಿವೋರ್ಸ್ ಪ್ರಕಟಣೆಯಿಂದ ನನ್ನ ಮಕ್ಕಳು ಮತ್ತು ನಾನು ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ಮದುವೆಯನ್ನು ವಿಸರ್ಜಿಸುವ ಮತ್ತು ಪ್ರತ್ಯೇಕಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯು ನಮಗೆ ಅತೀವ ದುಃಖವನ್ನುಂಟುಮಾಡಿದ್ದರೂ, ನಾನು ಗೌರವದಿಂದ ವರ್ತಿಸಬೇಕೆಂದು ಭಾವಿಸುತ್ತೇನೆ. ಈ ಕಾರಣಕ್ಕೆ ನಾನು ಈವರೆಗೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಇನ್ನು ಈ ಪ್ರಕರಣದಲ್ಲಿ ನನ್ನನ್ನು ದೂಷಿಸುವ ಮತ್ತು ನನ್ನ ಪಾತ್ರವನ್ನು ತಪ್ಪಾಗಿ ನಿರೂಪಿಸುವ ಸುದ್ದಿಯಿಂದ ನಾನು ತೀವ್ರವಾಗಿ ನೋಂದಿದ್ದೇನೆ. ತಾಯಿಯಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ನನ್ನ ಮಕ್ಕಳ ಯೋಗಕ್ಷೇಮವಾಗಿದೆ. ಈ ಘಟನೆ ನನ್ನ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಹೆದರುತ್ತೇನೆ. ನಮ್ಮ ಮಕ್ಕಳ ಯೋಗಕ್ಷೇಮದ ಮೇಲೆ ನನ್ನ ಗಮನವಿದೆ ಮತ್ತು ಈ ಕಷ್ಟದ ಸಮಯದಲ್ಲಿ ನಾನು ಅವರನ್ನು ರಕ್ಷಿಸುತ್ತೇನೆ. ನಾನು ಪತ್ರಿಕೆಗಳು, ಮಾಧ್ಯಮಗಳು ಮತ್ತು ನಮ್ಮ ಆತ್ಮೀಯ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಏಕೆಂದರೆ, ಸಮಯಕ್ಕೆ ಸತ್ಯವು ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ದಯೆ ಮತ್ತು ಪ್ರೀತಿ ನಮ್ಮ ಶಕ್ತಿ. ನಮ್ಮ ಜೀವನದ ಈ ಅಧ್ಯಾಯದಲ್ಲಿ ನಿಮ್ಮ ಗೌಪ್ಯತೆಯನ್ನು ಕೋರುತ್ತೇನೆ ಎಂದಿದ್ದಾರೆ.
ಜಯಂ ರವಿ ಪತ್ರದಲ್ಲೇನಿತ್ತು?
ಹೆಚ್ಚು ಯೋಚಿಸಿದ ನಂತರ ಆರತಿಯೊಂದಿಗೆ ನನ್ನ ವೈವಾಹಿಕ ಜೀವನದಿಂದ ದೂರವಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ಆತುರವಾಗಿ ತೆಗೆದುಕೊಂಡಿಲ್ಲ, ಕೆಲವು ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ ನನ್ನ ಖಾಸಗಿತನ ಮತ್ತು ನನಗೆ ಹತ್ತಿರವಿರುವವರ ಗೌಪ್ಯತೆಯನ್ನು ಗೌರವಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಈ ನಿರ್ಧಾರವು ನನ್ನ ಸ್ವಂತ ನಿರ್ಧಾರವಾಗಿದೆ ಮತ್ತು ಈ ವಿಷಯವು ನನ್ನ ವೈಯಕ್ತಿಕ ವಿಷಯವಾಗಿ ಉಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಅಭಿನಯದ ಮೂಲಕ ನನ್ನ ಅಭಿಮಾನಿಗಳು ಮತ್ತು ಜನರಲ್ಲಿ ಸಂತೋಷ ಮತ್ತು ತೃಪ್ತಿಯನ್ನು ತರುವುದು ನನ್ನ ಆದ್ಯತೆಯಾಗಿದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿಯಾಗಿರಲು ಬಯಸುತ್ತೇನೆ. ನೀವು ನನಗೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಜಯಂ ರವಿ ಹೇಳಿದ್ದಾರೆ.
ಅಂದಹಾಗೆ ಜಯಂ ರವಿ ಅವರು 2009ರಲ್ಲಿ ಆರತಿಯನ್ನು ವಿವಾಹವಾದರು. ಆರತಿ, ತಮಿಳಿನ ಖ್ಯಾತ ನಿರ್ಮಾಪಕಿ ಸುಜಾತಾ ವಿಜಯ್ ಕುಮಾರ್ ಅವರ ಮಗಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಆರವ್ ಇತ್ತೀಚೆಗೆ ಟಿಕ್ ಟಿಕ್ ಟಿಕ್ ಚಿತ್ರದಲ್ಲಿ ನಟಿಸಿದ್ದರು. ರವಿ ಮತ್ತು ಆರತಿ ಜೋಡಿ ಕಾಲಿವುಡ್ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿ ಎಂದೇ ಹೆಸರುವಾಸಿಯಾಗಿತ್ತು. ಆದರೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದು, ಕೆಲ ದಿನಗಳಿಂದ ಇಬ್ಬರೂ ದೂರ ಉಳಿದಿದ್ದರು. ಇದೀಗ ಡಿವೋರ್ಸ್ ಆಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. (ಏಜೆನ್ಸೀಸ್)