

ಚೆನ್ನೈ: 'ರಣಧೀರ' ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ಪಡ್ಡೆಗಳ ನಿದ್ದೆಗೆಡೆಸಿದ್ದ ನಟಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿರುವ ನೆಟ್ಟಿಗರು, ಅದರಲ್ಲಿರುವುದು ಖುಷ್ಬೂ ಅವರೇನಾ ಎಂದು ಹುಬ್ಬೇರಿಸುವಂತಿದೆ. ಅದಕ್ಕೆ ಕಾರಣ, ಖುಷ್ಬೂ ತೂಕ ಇಳಿಸಿಕೊಂಡಿರುವುದು.
ಹೌದು, ಖುಷ್ಬೂ ತೂಕ ಇಳಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ತಮಿಳು ನಾಡು ಚುನಾವಣೆಗಳ ಸಂದರ್ಭದಲ್ಲಿ ದುಂಡಗಿದ್ದ ಖುಷ್ಬೂ, ಇತ್ತೀಚಿನ ಕೆಲವು ದಿನಗಳಲ್ಲಿ ಸಖತ್ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಎಷ್ಟು ವೇಯ್ಟ್ ಲಾಸ್ ಆಗಿದೆ ಎಂದು ಖುಷ್ಬೂ ಹೇಳಿಕೊಳ್ಳದಿದ್ದರೂ, ಮೂಲಗಳ ಪ್ರಕಾರ ಕಳೆದ ಮೂರ್ನಾಲ್ಕು ತಿಂಗಳ ಅಂತರದಲ್ಲಿ ಅವರು 12 ಕೆಜಿ ಇಳಿಸಿಕೊಂಡಿದ್ದಾರಂತೆ.
ಇದನ್ನೂ ಓದಿ: ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್…
ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದರ ಜತೆಜತೆಗೆ, 'ನಾವು ಹಾಕಿದ ಶ್ರಮಕ್ಕೆ ಪ್ರತಿಫಲ ಸಿಕ್ಕರೆ, ಆ ಸಂತೋಷವನ್ನು ವರ್ಣಿಸಲು ಅಸಾಧ್ಯ' ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಅವರ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುವುದರ ಜತೆಗೆ, ಖುಷ್ಬೂ ಅವರ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.