ಖಡಕ್ ಹಾಡುಗಳ ಆಗಮನ; ಧರ್ಮ ಕೀರ್ತಿರಾಜ್ ಖಾಕಿ ಖದರ್

Khadak
Published on

ಬೆಂಗಳೂರು: ಲವರ್ ಬಾಯ್ ಅವತಾರದಲ್ಲಿಯೇ ಇಷ್ಟು ದಿನ ಕಾಣಿಸಿಕೊಳ್ಳುತ್ತಿದ್ದ ಧರ್ಮ ಕೀರ್ತಿರಾಜ್, ಮೊದಲ ಸಲ ಖಾಕಿ ಧರಿಸಿ ‘ಖಡಕ್’ ಆಗಿಯೇ ಎಂಟ್ರಿಕೊಟ್ಟಿದ್ದಾರೆ. ‘ಖಡಕ್’ ಚಿತ್ರದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ನಟಿಸಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳು ಬಿಡುಗಡೆ ಆಗಿವೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ವಿನೋದ್ ಪ್ರಭಾಕರ್, ಪ್ರಥಮ್ ಆಗಮಿಸಿ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

‘ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಮೊದಲ ಸಲ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ’ ಎಂದು ಧರ್ಮ ಹೇಳಿದರೆ, ‘ಒಂದೊಳ್ಳೆಯ ತಂಡದ ಜತೆಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರದ ಭಾಗವಾಗಿದ್ದಕ್ಕೆ ಖುಷಿಯಿದೆ’ ಎಂದರು ನಾಯಕಿ ಅನುಷಾ. ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ, ‘ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅದರಲ್ಲೊಂದು ದೇಶಭಕ್ತಿ ಗೀತೆಯೂ ಇದೆ. ಎಂದಿನಂತೆ ಈ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಹಾಡಲು ಅವಕಾಶ ನೀಡಿದ್ದೇನೆ’ ಎಂದರು.

ನಂದಿನಿ ಕಂಬೈನ್ಸ್ ಮೂಲಕ ಸಿದ್ಧವಾಗಿರುವ ಈ ಚಿತ್ರಕ್ಕೆ ಟಿ.ಎನ್. ನಾಗೇಶ್ ನಿರ್ದೇಶನ ಮಾಡಿದರೆ, ವಲ್ಲಿ ಮತ್ತು ಸಿಂಗಾಪುರ ಸಿದ್ದರಾಮಯ್ಯ ಬಂಡವಾಳ ಹೂಡಿದ್ದಾರೆ. ಕಬೀರ್ ದುಹಾನ್ ಸಿಂಗ್ ಇಲ್ಲಿ ‘ಖಡಕ್’ ಖಳನಾಗಿದ್ದಾರೆ. ಇನ್ನುಳಿದಂತೆ ಸುಮನ್, ಕಮಲ್ ಸೇರಿ ಹಲವರು ಸಿನಿಮಾದಲ್ಲಿದ್ದಾರೆ. ಎಂ.ಎನ್. ಶಂಕರ್ ಛಾಯಾಗ್ರಹಣ ಮಾಡಿರುವ ಈ ಚಿತ್ರದ ಹಾಡುಗಳ ಹಕ್ಕನ್ನು ನಮ್ಮ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net