

ಬೆಂಗಳೂರು: ಬಿಡುಗಡೆಯಾದ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿಕೊಂಡಿದ್ದ ಕೆಜಿಎಫ್-ಚಾಪ್ಟರ್ 2 ಸಿನಿಮಾದ ಎರಡನೇ ದಿನದ ಗಳಿಕೆ 200 ಕೋಟಿ ರೂ. ದಾಟಿದೆ. ಆ ಮೂಲಕ ಈ ಸಿನಿಮಾ ಗಳಿಕೆಯಲ್ಲೂ ಮಾನ್ಸ್ಟರ್ ಎಂಬುದನ್ನು ಸಾಬೀತುಪಡಿಸಿದೆ.
ಬಹುನಿರೀಕ್ಷಿತ, ಅದ್ಧೂರಿ ನಿರ್ಮಾಣದ ಹಾಗೂ ಬಹುತಾರಾಗಣದ ಸಿನಿಮಾ ಕೆಜಿಎಫ್-ಚಾಪ್ಟರ್ 2 ಜಗತ್ತಿನಾದ್ಯಂತ ತೆರೆ ಮೇಲೆ ಅಬ್ಬರಿಸುತ್ತ ಭಾರಿ ಮೆಚ್ಚುಗೆ ಗಳಿಸುತ್ತಿರುವ ಜತೆಗೆ ಅದರ ಗಳಿಕೆ ಎಷ್ಟಿರಬಹುದು ಎಂಬ ಕುತೂಹಲವೂ ಉಂಟಾಗಿದ್ದು, ಹುಬ್ಬೇರಿಸುವಂಥ ಗಳಿಕೆಯನ್ನೇ ತಂದುಕೊಟ್ಟಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ.. ಹೀಗೆ ಐದು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರದ ಮೊದಲ ದಿನದ ಗಳಿಕೆ 134.5 ಕೋಟಿ ರೂ. ಆಗಿರುವುದನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ನಿನ್ನೆ ಅಧಿಕೃತವಾಗಿ ತಿಳಿಸಿತ್ತು. ಇದೀಗ ಎರಡನೇ ದಿನದ ಗಳಿಕೆ ಕುರಿತು ಕೂಡ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಮಾಹಿತಿ ಹೊರಹಾಕಿದೆ. ಆ ಪ್ರಕಾರ ಚಿತ್ರ ಎರಡನೇ ದಿನಕ್ಕೆ ಭಾರತದಲ್ಲಿ ಎಲ್ಲ ಭಾಷೆಗಳಿಂದ ಒಟ್ಟು 240 ಕೋಟಿ ರೂ. ಗಳಿಸಿದೆ.