ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅರ್ಚನಾ ಜೋಯಿಸ್

Archana 25 Jan 20
Published on

ಬೆಂಗಳೂರು: ‘ಕೆಜಿಎಫ್ 1’ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಅರ್ಚನಾ ಜೋಯಿಸ್, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯನ್ನು ನಟ ರಿಷಿ ಬುಧವಾರ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ‘ಮ್ಯೂಟ್’ ಎಂದು ಹೆಸರಿಡಲಾಗಿದೆ. ‘ಕೆಜಿಎಫ್’ ಚಿತ್ರದ ನಂತರ ‘ಕಾಲಾಂತಕ’, ‘ನಕ್ಷೆ’ ಮುಂತಾದ ಚಿತ್ರಗಳಲ್ಲಿ ಅರ್ಚನಾ ನಟಿಸಿದ್ದರು. ಒಳ್ಳೆಯ ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ, ಈಗ ‘ಮ್ಯೂಟ್’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಕನ್ನಡವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ.

ಈ ಹಿಂದೆ, ‘ಮುಂಗಾರು ಮಳೆ 2’ ಚಿತ್ರವನ್ನು ನಿರ್ವಿುಸಿದ್ದ ಜಿ. ಗಂಗಾಧರ್ ಈ ಚಿತ್ರವನ್ನು ನಿರ್ವಿುಸಿದ್ದಾರೆ. ‘ಮುಂಗಾರು ಮಳೆ 2’ ಚಿತ್ರದಲ್ಲಿ ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಶೀರ್ಷಿಕೆಯ ಕುರಿತಾಗಿ 40 ಸೆಕೆಂಡ್ ವಿಡಿಯೋವೊಂದನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದು, ಚಿತ್ರದಲ್ಲಿ ತಮಿಳಿನ ಜನಪ್ರಿಯ ನಟ ‘ಆಡುಕಲಂ’ ನರೇನ್ ಹಾಗೂ ಸಿದ್ಧಾರ್ಥ್ ಮಾಧ್ಯಮಿಕ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net