5000 ಪರದೆಗಳಲ್ಲಿ ಕೆಜಿಎಫ್ 2; ಹೊರ ದೇಶಗಳಲ್ಲಿ ತೆಲುಗಿಗೆ ಹೆಚ್ಚಿದ ಬೇಡಿಕೆ

Published on

ಬೆಂಗಳೂರು: ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್ 2’ಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ಏ.14ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಭಾರತದಲ್ಲೇ ದಾಖಲೆಯ ಐದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು, ‘ಭಾರತದಲ್ಲಿ 9500 ಚಿತ್ರಮಂದಿರಗಳಿದ್ದು, ಈ ಪೈಕಿ ಐದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲೇ 500ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅಮೆರಿಕಾದಲ್ಲಿ ಟಿಕೆಟ್​ಗಳು ದೊಡ್ಡ ಸಂಖ್ಯೆಯಲ್ಲಿ ಬುಕ್ ಆಗಿದ್ದು, ತೆಲುಗು ಮಾತನಾಡುವ ಜನಸಂಖ್ಯೆ ಜಾಸ್ತಿ ಇರುವುದರಿಂದ, ತೆಲುಗು ಅವತರಣಿಕೆಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ತಮಿಳು, ಹಿಂದಿ ಭಾಷೆಗಳಲ್ಲಿ ಬೇರೆ ಚಿತ್ರಗಳಿಂದ ಸ್ಪರ್ಧೆ ಇರುವುದರಿಂದ, ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ತಡರಾತ್ರಿಯ ಪ್ರದರ್ಶನಗಳು ಇರುವುದಿಲ್ಲ. ಕೆಲವು ಕಡೆ ಬೆಳಗಿನ ಜಾವದ ಪ್ರದರ್ಶನಗಳಿರುತ್ತವೆ’ ಎನ್ನುತ್ತಾರೆ. ‘ಕೆಜಿಎಫ್ 2’ ನಂತರ ‘ಕೆಜಿಎಫ್ 3’ ಮಾಡುವ ಯೋಚನೆ ಏನಾದರೂ ಇದೆಯಾ ಎಂದರೆ, ಏ. 14ರ ನಂತರ ನೋಡೋಣ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ್. ‘‘ಅವೆಂಜರ್ಸ್’ ತರಹವೇ ‘ಕೆಜಿಎಫ್’ ಸರಣಿಗೂ ಬ್ರಾಂಡ್ ವ್ಯಾಲ್ಯೂ ಇದೆ. ಚಿತ್ರವನ್ನು ಮುಂದುವರಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಸದ್ಯಕ್ಕೆ ಚಿತ್ರವನ್ನು ಮುಂದುವರಿಸುವ ಯೋಚನೆ ಇಲ್ಲ. ‘ಕೆಜಿಎಫ್ 2’ ಯಶಸ್ವಿಯಾದರೆ ಮುಂದೆ ನೋಡೋಣ’ ಎನ್ನುತ್ತಾರೆ.

ಲಾಭ ಬಂದಿಲ್ಲ; ಬಜೆಟ್ ಹೇಳಲ್ಲ

‘ಕೆಜಿಎಫ್ 2’ ಚಿತ್ರಕ್ಕೆ ದೊಡ್ಡ ಬೇಡಿಕೆ ಇರುವುದರಿಂದ ಸಹಜವಾಗಿಯೇ ಎಷ್ಟು ಬಿಜಿನೆಸ್ ಆಗಿದೆ, ಬಿಡುಗಡೆಗೆ ಮುಂಚೆಯೇ ಎಷ್ಟು ಲಾಭವಾಗಿದೆ ಮತ್ತು ಚಿತ್ರದ ಬಜೆಟ್ ಎಷ್ಟಾಗಿದೆ ಎಂಬ ಪ್ರಶ್ನೆಗಳು ಸಹಜ. ಆದರೆ, ವಿಜಯ್ ಕುಮಾರ್ ಕಿರಗಂದೂರು ಇದ್ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ‘ಬಿಡುಗಡೆಗೆ ಮುನ್ನ ಲಾಭ ಬಂದಿಲ್ಲ. ನಾವು ಚಿತ್ರ ಮಾರಾಟ ಮಾಡಿಲ್ಲ. ಇದುವರೆಗೂ ನಮ್ಮ ಯಾವುದೇ ಚಿತ್ರದ ಬಜೆಟ್ ಬಹಿರಂಗ ಪಡಿಸಿಲ್ಲ. ಬಜೆಟ್ ಹೇಳುವುದಕ್ಕೆ ಇಷ್ಟವಿಲ್ಲ’ ಎಂದು ಹೇಳುತ್ತಾರೆ.

ಪೈರಸಿ ತಡೆಯುವುದು ಜನರ ಕೈಯಲ್ಲಿದೆ

ಯಾವುದೇ ದೊಡ್ಡ ಚಿತ್ರಕ್ಕಾದರೂ ಪೈರಸಿ ದೊಡ್ಡ ಶತ್ರು. ‘ಕೆಜಿಎಫ್ 2’ ಸಹ ಈ ಸಮಸ್ಯೆಯಿಂದ ಹೊರತಲ್ಲ. ಪೈರಸಿ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳ ಲಾಗಿದೆ ಎಂಬ ಪ್ರಶ್ನೆಗೆ ಯಶ್ ಉತ್ತರಿಸುತ್ತಾರೆ. ‘ನಾವು ಚಾಪೆ ಕೆಳಗೆ ತೂರಿದರೆ, ಅವರು ರಂಗೋಲಿ ಕೆಳಗೆ ತೂರುತ್ತಾರೆ. ಹಾಗಾಗಿ, ಜನ ತೀರ್ವನಿಸ ಬೇಕು. ಚರ್ಮ ಖರೀದಿಸು ವುದನ್ನು ನಿಲ್ಲಿಸಿದರೆ, ಪ್ರಾಣಿಗಳನ್ನು ಕೊಲ್ಲುವುದು ಸಹ ತಪು್ಪತ್ತದೆ. ಹಾಗೆಯೇ, ಪೈರಸಿ ನೋಡಬಾರದು ಎಂದು ಜನ ತೀರ್ವನಿಸಿದರೆ, ಪೈರಸಿ ಸಹ ನಿಲ್ಲುತ್ತದೆ. ಜನ ಪೈರಸಿ ಚಿತ್ರವನ್ನೇ ನೋಡಬೇಕು ಎಂದು ತೀರ್ವನಿಸಿದರೆ, ಅದು ಅವರ ನಷ್ಟ. ಚಿತ್ರಮಂದಿರದಲ್ಲಿ ಚಿತ್ರ ಚೆನ್ನಾಗಿ ಕಾಣಿಸಬೇಕು, ಕೇಳಿಸಬೇಕು ಎಂದು ಬಹಳ ಕೆಲಸ ಮಾಡಿರುತ್ತೀವಿ. ಹಾಗಾಗಿ, ಜನ ತೀರ್ವನಿಸಬೇಕು’ ಎನ್ನುತ್ತಾರೆ ಯಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net