

ಬೆಂಗಳೂರು: ನಿನ್ನೆ ಸುಮಾರು ಇಷ್ಟು ಹೊತ್ತಿಗೆ ಅದ್ಧೂರಿಯಾಗಿ ಬಿಡುಗಡೆ ಆಗಿದ್ದ ಕೆಜಿಎಫ್ 2 ಟ್ರೇಲರ್ 24 ಗಂಟೆಗಳಲ್ಲಿ ಇದೀಗ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿರುವುದಲ್ಲದೇ, ಇನ್ನೂ ಭರ್ಜರಿಯಾಗಿಯೇ ಪ್ರತಿಕ್ರಿಯೆಯನ್ನು ಪಡೆಯುತ್ತಲೇ ಇದೆ.
ನಿನ್ನೆ ಬೆಂಗಳೂರಿನ ಮಾಲ್ವೊಂದರಲ್ಲಿ ಆಯೋಜಿಸಿದ್ದ ಅದ್ಧೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೆಜಿಎಫ್ 2 ಚಿತ್ರದ ಟ್ರೇಲರನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಿದ್ದು, ಎಲ್ಲ ಭಾಷೆಗಳಲ್ಲೂ ಸೇರಿ 24 ಗಂಟೆಗಳಲ್ಲಿ ಈ ಟ್ರೇಲರ್ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿದೆ.
'ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್.. ಬಟ್ ವೈಲೆನ್ಸ್ ಲೈಕ್ಸ್ ಮೀ, ಐ ಕಾಂಟ್ ಅವಾಯ್ಡ್..' ಎಂದು ಯಶ್ ರಾಕಿಭಾಯ್ ಆಗಿ ಹೇಳುವ ಡೈಲಾಗ್ವೊಂದು ಈ ಟ್ರೇಲರ್ನಲ್ಲಿದೆ. ಈಗ ಈ ಟ್ರೇಲರ್ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡ ಖುಷಿಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅದೇ ವೈಲೆನ್ಸ್ ಡೈಲಾಗ್ ಶೈಲಿಯಲ್ಲೇ ಹೇಳಿಕೊಂಡಿದ್ದಾರೆ.
'ರೆಕಾರ್ಡ್ಸ್.. ರೆಕಾರ್ಡ್ಸ್.. ರೆಕಾರ್ಡ್ಸ್.. ರಾಕಿ ಡೋಂಟ್ ಲೈಕ್ ಇಟ್.. ಹೀ ಅವಾಯ್ಡ್ಸ್, ಬಟ್ ರೆಕಾರ್ಡ್ಸ್ ಲೈಕ್ಸ್ ರಾಕಿ, ಹೀ ಕಾಂಟ್ ಅವಾಯ್ಡ್ ಇಟ್..' ಎಂದು ಹೇಳಿಕೊಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಕನ್ನಡ (1.8 ಕೋಟಿ), ತೆಲುಗು (2 ಕೋಟಿ), ಹಿಂದಿ (5.1 ಕೋಟಿ), ತಮಿಳು (12 ಕೋಟಿ) ಹಾಗೂ ಮಲಯಾಳಂ (8 ಕೋಟಿ) ಭಾಷೆಗಳೆಲ್ಲವೂ ಸೇರಿ ಕೆಜಿಎಫ್-2 ಟ್ರೇಲರ್ ಒಟ್ಟು 10.9 ಕೋಟಿಗೂ ಅಧಿಕ ವೀಕ್ಷಣೆ ಕಂಡ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.