

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಹಾಸ್ಯನಟರಾಗಿ ಗುರುತಿಸಿ ಕೊಂಡವರು ಕೆಂಪೇಗೌಡ. ಈ ಹಿಂದೆ ಅವರು ಚಿತ್ರವೊಂದರಲ್ಲಿ ಹೀರೋ ಆಗಿ ನಟಿಸಿದ್ದರೂ, ಅದಿನ್ನೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಅವರು ‘ಎನ್ಟಿಆರ್’ ಎಂಬ ಇನ್ನೊಂದು ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದು, ಇತ್ತೀಚೆಗೆ ಪ್ರಜ್ವಲ್ ದೇವರಾಜ್ ಚಿತ್ರದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರವನ್ನು ಭರತ್ ಗೌಡ ನಿರ್ವಿುಸುತ್ತಿದ್ದು, ಜಾಕಿ ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ ಅಜೇಯ್ ಅಭಿನಯದ ‘ಶೋಕಿವಾಲ’ ಚಿತ್ರವನ್ನು ನಿರ್ದೇಶಿಸಿದ್ದ ಜಾಕಿಗೆ ಇದು ಎರಡನೆಯ ಚಿತ್ರ. ‘ಎನ್ಟಿಆರ್’ ಎಂದರೆ ‘ನಮ್ಮ ತಾಲ್ಲೂಕಿನ ರೂಲರ್’ ಎಂದರ್ಥ ಎಂದು ವಿವರಿಸುತ್ತಾರೆ. ಇದೊಂದು ಪಕ್ಕಾ ಹಳ್ಳಿ ವಾತಾವರಣದ ಸಿನಿಮಾ ಎನ್ನುವ ಕೆಂಪೇಗೌಡ, ‘‘ಅಧ್ಯಕ್ಷ’, ‘ಕಿರಾತಕ’ ತರಹ ಇದು ಸಹ ಒಂದು ಗ್ರಾಮೀಣ ವಾತಾವರಣದ ಕಾಮಿಡಿ ಚಿತ್ರ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಕೊಳ್ಳುತ್ತಿದ್ದು, ಸಾಧು ಕೋಕಿಲ, ರವಿಶಂಕರ್, ತಬಲಾ ನಾಣಿ, ರಾಜೇಶ್ ನಟರಂಗ ಮುಂತಾದ ದೊಡ್ಡ ನಟರು ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ’ ಎಂದು ವಿವರ ಕೊಡುತ್ತಾರೆ. ‘ಎನ್ಟಿಆರ್’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ.