

ಚೆನ್ನೈ: ನಟಿ ಕೀರ್ತಿ ಸುರೇಶ್ ( Keerthy Suresh ) ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಸದ್ಯ ಬಾಲಿವುಡ್ಗೂ ಕೀರ್ತಿ ಸುರೇಶ್ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್ ನಟನೆಯ ಬಾಬಿ ಜಾನ್ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ತಮಿಳು ಸಿನಿಮಾ ಥೇರಿ ರಿಮೇಕ್.
ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದು, ಗೋವಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.
ನಟಿ ಕೀರ್ತಿ ಸುರೇಶ್ ಅವರು ಖ್ಯಾತ ಸಂಗೀತಗಾರ ಅನಿರುದ್ಧ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ವರ್ಷ ಹಬ್ಬಿತ್ತು. ಸದ್ಯದಲ್ಲೇ ಇವರಿಬ್ಬರ ಮದುವೆ ನಡೆಯಲಿದೆ ಎಂದೂ ಹೇಳಲಾಗಿತ್ತು. ಆದರೆ, ಇದೆಲ್ಲ ಕೇವಲ ವದಂತಿಯಷ್ಟೇ ಎಂದು ಕೀರ್ತಿ ಸುರೇಶ್ ಅವರ ತಂದೆ ಅಂತ್ಯ ಹಾಡಿದ್ದರು. ಇದೇ ಸಮಯದಲ್ಲಿ ಕೀರ್ತಿ ಸುರೇಶ್ ಮದುವೆ ಬಗ್ಗೆ ಹೊಸ ಮಾಹಿತಿಯೊಂದು ಹರಿದಾಡುತ್ತಿದೆ.
ಮುಂಬರುವ ಡಿಸೆಂಬರ್‌ನಲ್ಲಿ ಕೀರ್ತಿ ಸುರೇಶ್ ಅವರು ವಿವಾಹವಾಗಲಿದ್ದಾರಂತೆ. ಅವರ ಭಾವಿ ಪತಿ ಸಂಬಂಧಿಯಾಗಿದ್ದು, ಪಾಲಕರಿಂದ ಸಂಪೂರ್ಣವಾಗಿ ನಿಶ್ಚಯಿಸಿದ ಮದುವೆಯಾಗಿದೆ ಎಂದು ವರದಿಯಾಗಿದೆ. ಈ ಮದುವೆಗೆ ಕೀರ್ತಿ ಸುರೇಶ್ ಕೂಡ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.
ಇನ್ನು ಮದುವೆ ವಿಚಾರದ ಬಗ್ಗೆ ಕೀರ್ತಿ ಸುರೇಶ್ ಕಡೆಯಿಂದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದೂ ಗಮನಾರ್ಹ. ಕೀರ್ತಿ ಸುರೇಶ್ ಅವರ ಈ ನಿರ್ಧಾರವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಮದುವೆ ಸುದ್ದಿ ಎಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್)