

ಬೆಂಗಳೂರು: ಲಾಕ್ಡೌನ್ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
2020ರ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿತ್ರೋದ್ಯಮದ 6000 ಕುಟುಂಬಗಳಿಗೆ ತಲಾ ಮೂರು ಸಾವಿರ ರೂ. ಮೌಲ್ಯದ ದಿನಸಿ ಪಡಿತರ ರಿಲೆಯನ್ಸ್ ಕೂಪನ್ ಅನ್ನು ಸರ್ಕಾರದ ವತಿಯಿಂದ ನೀಡಿತ್ತು. ಹಾಗೆಯೇ, ಇಂದಿನ ಸಂಕಷ್ಟದ ಸಮಯದಲ್ಲೂ ಕನಿಷ್ಟ 5000 ರೂ. ಮೌಲ್ಯದ ಆಹಾರ ಪಡಿತರ ಕೂಪನ್ ಹಾಗೂ ಇತರೆ ವಿಶೇಷ ನೆರವನ್ನು ನೀಡಿದಲ್ಲಿ ಚಿತ್ರೋದ್ಯಮಕ್ಕೆ ಕನಿಷ್ಟ ಆಸರೆ ಆದದಂತಾಗುತ್ತದೆ ಎಂದು ಪುರಾಣಿಕ್ ತಮ್ಮ ಮನವಿ ಪತ್ರದಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್ ಸಹ ಪುರಾಣಿಕ್ ಜತೆಗಿದ್ದರು. 'ಚಿತ್ರೋದ್ಯಮದ ಸಾಕಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿರುವುದಿಲ್ಲ. ಕೆಲವರು ವಯಸ್ಸಿನ ಕಾರಣ ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಲಸಿಕೆ ಪಡೆದಿರುವುದಿಲ್ಲ. ಆದ್ದರಿಂದ ಚಿತ್ರೋದ್ಯಮವನ್ನು ಆದ್ಯತೆ ಎಂದು ಪರಿಗಣಿಸಿ ಕೋವಿಡ್ ಲಸಿಕೆಯನ್ನು ಹಾಕಲು ಪ್ರತ್ಯೇಕವಾದ ವ್ಯವಸ್ಥೆ ಮಾಡುವಂತೆ' ಅವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೊದಲ ಹಂತದ ಪ್ಯಾಕೇಜ್ನಲ್ಲಿ ಕೆಲವರು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು ಮುಂದಿನ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.