ಕಾವ್ಯಾ ಶಾಸ್ತ್ರಿ ಪ್ಲಾಸ್ಮಾ ದಾನ; ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದ ನಟಿ

Kavya Sha
Published on

ಬೆಂಗಳೂರು: ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಸಿನಿಮಾಮಂದಿ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಒಂದಿಲ್ಲೊಂದು ಕೆಲಸ ಮಾಡುತ್ತಿದ್ದಾರೆ. ಇದೀಗ ನಟಿ ಕಾವ್ಯಾ ಶಾಸ್ತ್ರಿ ಒಂದು ಹೆಜ್ಜೆ ಮುಂದೆ ಬಂದು ಪ್ಲಾಸ್ಮಾ ಡೊನೇಟ್ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಕಳೆದ ನವೆಂಬರ್​ನಲ್ಲಿಯೇ ಕಾವ್ಯಾ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದ ಚೇತರಿಕೆಯನ್ನೂ ಕಂಡಿದ್ದರು. ಹೀಗಿರುವಾಗಲೇ ಇತ್ತೀಚಿನ ಕೆಲ ದಿನಗಳಿಂದ ಪ್ಲಾಸ್ಮಾ ದಾನ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಪ್ಲಾಸ್ಮಾ ದಾನ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕಾವ್ಯಾ ವಿಜಯವಾಣಿ ಜತೆಗೆ ಮಾತನಾಡಿದ್ದಾರೆ. ‘ಕಳೆದ ಕೋವಿಡ್ ಸಮಯದಲ್ಲಿಯೇ ನಾನು ಪ್ಲಾಸ್ಮಾ ನೀಡಬೇಕಿತ್ತು. ಆಗ ಹಿಮೋಗ್ಲೊಬಿನ್ ಪ್ರಮಾಣ ಕಡಿಮೆ ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಸಲ ರಕ್ತದ ಪ್ರಮಾಣ ಹೆಚ್ಚಿಸಿಕೊಂಡು ಪ್ಲಾಸ್ಮಾ ನೀಡಿದ್ದೇನೆ. ಕೋವಿಡ್​ನಿಂದ ಸುಧಾರಿಸಿಕೊಂಡು 28 ದಿನಗಳ ನಂತರ 6 ತಿಂಗಳ ಒಳಗೆ ಪ್ಲಾಸ್ಮಾ ನೀಡಬಹುದು. ನಮ್ಮ ತಂದೆಯವರೆಗೂ ಕೋವಿಡ್ ಆದಾಗ ದಾನಿಯೊಬ್ಬರು ಪ್ಲಾಸ್ಮಾ ನೀಡಿದ್ದರು. ಅದರ ಮಹತ್ವ ಗೊತ್ತಾಗಿ ಇದೀಗ ನಾನೇ ನೀಡಿದ್ದೇನೆ. ಈಗ ಪ್ಲಾಸ್ಮಾ ನೀಡಲು ಜನ ಮುಂದೆ ಬರುತ್ತಿಲ್ಲ. ಭಯದಲ್ಲಿಯೇ ಇದ್ದಾರೆ. ಆ ಕಾರಣಕ್ಕೆ ನಾನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ. ಅದರಿಂದಾದರೂ ಕೆಲವರು ನೀಡಿದರೆ, ನಮ್ಮ ಸಣ್ಣ ಜವಾಬ್ದಾರಿ ಸಾರ್ಥಕ’ ಎನ್ನುತ್ತಾರವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net