ಭಾವಿ ಪತಿಯ ಫೋಟೋ ಹಂಚಿಕೊಂಡ ಕಿರುತೆರೆಯ ಖ್ಯಾತ ನಟಿ! ಹೇಗಿದೆ ನೋಡಿ ಈ ಜೋಡಿ..

KAVYA
Published on

ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ನಿಮಗೆಲ್ಲರಿಗೂ ಗೊತ್ತಿರುತ್ತಾರೆ. ಇದೀಗ ಅದೇ ನಟಿ ಸುದ್ದಿಯಲ್ಲಿದ್ದಾರೆ. ತಾವು ಮದುವೆಯಾಗಲಿರುವ ಹುಡುಗನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ರಿಯತಮನಿಗೆ ಒಂದು ಪ್ರೀತಿಯ ಸಂದೇಶವನ್ನೂ ಕೊಟ್ಟಿದ್ದಾರೆ.

ಕಾವ್ಯಾ ತಮ್ಮ ಭಾವಿ ಪತಿಯೊಂದಿಗೆ ದುಬೈನಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಹೆಲೋ ಮುದ್ದು ಮಾ.. ನಿನ್ನೊಂದಿಗೆ ನನ್ನ ನೂತನ ಜೀವನವನ್ನು ಆರಂಭಿಸಲು ಕಾತುರದಿಂದ ಕಾಯುತ್ತಿದ್ದೇನೆ. ನಿನ್ನ ಜತೆಗೆ ನಾನು ಕಳೆದ ಪ್ರತಿ ಕ್ಷಣಗಳು ಸುಂದರ ಕ್ಷಣಗಳಾಗಿವೆ. ನಿನ್ನಷ್ಟು ಉತ್ತಮ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ನಿನ್ನ ಮುಗ್ಧತೆ, ತಾಳ್ಮೆ, ಪ್ರೀತಿ, ಕಾಳಜಿ ನೋಡಿದರೆ ನಾನು ವಿಶ್ವದ ತುತ್ತ ತುದಿಯಲ್ಲಿ ಇದ್ದೇನೆ ಎಂದು ನನಗೆನಿಸುತ್ತದೆ. ನನ್ನ ಜೀವನವನ್ನು ಇಷ್ಟೊಂದು ಸುಂದರಗೊಳಿಸಿದ್ದಕ್ಕೆ ಧನ್ಯವಾದಗಳು.

ನಿನ್ನ ಜತೆಗೆ ಪ್ರತಿಕ್ಷಣ ಇರುತ್ತೇನೆಂದು ಪ್ರಮಾಣ ಮಾಡುತ್ತೇನೆ. ನಿನ್ನ ಕನಸು ನನ್ನ ಕನಸೂ ಕೂಡ, ಅದಕ್ಕಾಗಿ ಹೋರಾಡುತ್ತೇನೆ. ನಿನ್ನ ಜೀವನದಲ್ಲಿ ಏನೇ ಆದರೂ ನಾನು ನಿನ್ನ ಜತೆ ನಿಲ್ಲುತ್ತೇನೆ. ನಾನು ನಂಬುವ ಸಾಯಿ ಬಾಬಾ ಎಂದಿಗೂ ನನ್ನನ್ನು ಕೆಳಗೆ ಬೀಳಲು ಬಿಡುವುದಿಲ್ಲ. ಜೀವನದಲ್ಲಿ ಉತ್ತಮವಾಗಿರುವು ಸಿಗುವುದಕ್ಕೆ ಕಾಯಬೇಕು. ನೀನು ಸಿಗುವ ಮುನ್ನ ನಾನು ಕಾದಿದ್ದಕ್ಕೆ ಖುಷಿಯಿದೆ. ನಿನ್ನಂಥ ಅದ್ಭುತ ವ್ಯಕ್ತಿಯನ್ನು ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಜಗತ್ತಿಗೆ ನನ್ನ ಧನ್ಯವಾದ. ನೀ ನನಗೆ ದೊಡ್ಡ ಉಡುಗೊರೆ. ನಿನ್ನನ್ನು ನನಗೆ ಕೊಟ್ಟ ಸಾಯಿ ಬಾಬಾನಿಗೆ ಸದಾ ಋಣಿಯಾಗಿರುವೆ ಎಂದು ಬರೆದುಕೊಂಡಿದ್ದಾರೆ.

ಭಾವಿ ಪತಿಯ ಹೆಸರನ್ನಾಗಲೀ ಅಥವಾ ವೃತ್ತಿಯ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ಕಾವ್ಯ ಹಂಚಿಕೊಂಡಿಲ್ಲ. ಯಾವಾಗ ಮದುವೆ? ಎನ್ನುವ ಬಗ್ಗೆಯೂ ಜನರು ಪ್ರಶ್ನೆ ಕೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net