

ಬೆಂಗಳೂರು: ‘ಸೂರ್ಯವಂಶಿ’ ನಂತರ ಕತ್ರೀನಾ ಕೈಫ್ ಎಂಬ ಸಪೂರ ಸುಂದರಿ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಆಕೆ ಮುಂದೇನು ಮಾಡಬಹುದು, ಯಾವ ತರಹದ ಕಥೆ ಒಪ್ಪಿಕೊಳ್ಳಬಹುದು, ಆ ಚಿತ್ರ ಯಾವಾಗ ಪ್ರಾರಂಭವಾಗಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಇದೀಗ, ‘ಫೋನ್ ಭೂತ್’ ಎಂಬ ಹೊಸ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.
ಹೆಸರು ಓದುತ್ತಿದ್ದಂತೆಯೇ, ಇಲ್ಲೇನೋ ತಪ್ಪಾಗಿದೆ ಎಂದನಿಸುವುದು ಸಹಜ. ಅದು ಭೂತ್ ಅಲ್ಲ, ಬೂತ್ ಎಂದು ತಿದ್ದುವುದಕ್ಕೆ ಮುಂದಾಗಬಹುದು. ಇಲ್ಲಿ ಯಾವುದೇ ತಪ್ಪಾಗಿಲ್ಲ. ಇದೊಂದು ಹಾರರ್ ಕಾಮಿಡಿ ಚಿತ್ರ. ದೆವ್ವ-ಭೂತಗಳ ಸುತ್ತ ಕಥೆ ಸುತ್ತುವುದರಿಂದ, ಚಿತ್ರಕ್ಕೆ ‘ಫೋನ್ ಭೂತ್’ ಎಂದು ಹೆಸರಿಡಲಾಗಿದೆ. ಇಲ್ಲಿ ಫೋನ್ಗೂ, ಭೂತಕ್ಕೂ ಏನೋ ಒಂದು ವಿಚಿತ್ರ ಕನೆಕ್ಷನ್ ಇದೆ. ಆ ಕನೆಕ್ಷನ್ ಏನು ಎಂದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗೋಕೆ ಸಾಧ್ಯ. ಈ ಚಿತ್ರದಲ್ಲಿ ಕತ್ರೀನಾ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಜತೆಗೆ ಸಿದ್ಧಾಂತ್ ಚತುರ್ವೆಶಿ ಮತ್ತು ಇಶಾನ್ ಕಟ್ಟರ್ ಸಹ ಅಭಿನಯಿಸುತ್ತಿದ್ದಾರೆ.
ಇನ್ನು ಗುರುಮೀಸ್ ಸಿಂಗ್ ಈ ಚಿತ್ರ ನಿರ್ದೇಶಿಸಿದರೆ, ನಟ-ನಿರ್ದೇಶಕ ಫರ್ಹಾನ್ ಆಖ್ತರ್ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಲಾಕ್ಡೌನ್ ಶುರುವಾಗುವ ಮುನ್ನವೇ ಚಿತ್ರದ ಫೋಟೋಶೂಟ್ ಸಹ ಆಗಿತ್ತು. ಇನ್ನು ಲಾಕ್ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಚಿತ್ರೀಕರಣವೇ ಮುಗಿದಿರುತ್ತಿತ್ತು. ಆದರೆ, ಈಗ ಎಲ್ಲವೂ ತಲೆ ಕೆಳಗಾಗಿದ್ದು, ಕರೊನಾ ಹಾವಳಿ ಸ್ವಲ್ಪ ತಹಬದಿಗೆ ಬಂದ ನಂತರ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ. ಇನ್ನು 2021ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.