

ನವದೆಹಲಿ: ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಹಾಗೂ ನಟ ವಿಕಿ ಕೌಶಲ್ ಅವರು ಇಂದು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಮದುವೆಯದ್ದು ಎನ್ನಲಾದ ಹಲವು ಫೋಟೋಗಳು ಹರಿದಾಡಲಾರಂಭಿಸಿದ್ದು, ಕೊನೆಗೂ ಅವು ನಕಲಿ ಎಂಬುದು ದೃಢಪಟ್ಟಿವೆ. ಮಾತ್ರವಲ್ಲ, ಇದೀಗ ಅಸಲಿ ಫೋಟೋಗಳು ಹೊರಹೊಮ್ಮಿವೆ.
ತಮ್ಮ ಮದುವೆಯ ಯಾವ ಫೋಟೋ-ವಿಡಿಯೋಗಳೂ ಹೊರಬೀಳದಂತೆ ಭಾರಿ ಎಚ್ಚರಿಕೆ ವಹಿಸಿ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದಲ್ಲಿ ಅವರಿಬ್ಬರು ವಿವಾಹವಾಗಿದ್ದಾರೆ. ಅಲ್ಲದೆ ಇವರಿಬ್ಬರ ವಿವಾಹ ಸಮಾರಂಭದ ರಸಕ್ಷಣಗಳ ಪ್ರಸಾರ ಹಕ್ಕುಗಳನ್ನು ಒಟಿಟಿ ವೇದಿಕೆಗಳು ಖರೀದಿಸಿವೆ ಎಂಬ ಹಿನ್ನೆಲೆಯಲ್ಲಿ ಇಂಥದ್ದೊಂದು ಎಚ್ಚರಿಕೆ ವಹಿಸಲಾಗಿದೆ ಎನ್ನಲಾಗಿದೆ.
ಅದಾಗ್ಯೂ ಕೊನೆಗೂ ಇವರಿಬ್ಬರ ಮದುವೆಯ ಅಧಿಕೃತ ಫೋಟೋಗಳು ಬಹಿರಂಗಗೊಂಡಿದ್ದು, ಇದೀಗ ವೈರಲ್ ಆಗಲಾರಂಭಿಸಿವೆ. ಆ ಪೈಕಿ ನಾಲ್ಕು ಫೋಟೋಗಳು ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಎಲ್ಲೆಡೆ ಹರಿದಾಡಲಾರಂಭಿಸಿವೆ.