

ಬೆಂಗಳೂರು: ಇತ್ತೀಚೆಗಷ್ಟೇ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದ ಕಸ್ತೂರಿ ಮಹಲ್ ಸಿನಿಮಾ, ಇದೀಗ ಮತ್ತೆ ಸುದ್ದಿಯಲ್ಲಿದೆ. ರಚಿತಾ ರಾಮ್ ಜಾಗಕ್ಕೆ ಶಾನ್ವಿ ಶ್ರೀವಾಸ್ತವ್ ಆಗಮಿಸುತ್ತಿದ್ದಂತೆ, ಇದೀಗ ಅವರ ಲುಕ್ ಸಹ ರಿವೀಲ್ ಮಾಡಿದ್ದಾರೆ ನಿರ್ದೇಶಕರು.
ಹೌದು, ಈ ಮೊದಲೇ ಹೇಳಿದಂತೆ, ಕಸ್ತೂರಿ ಮಹಲ್ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯದ್ದು. ಹಾರರ್ ಅಂಶಗಳೂ ಇರುವುದರಿಂದ ಶೀರ್ಷಿಕೆ ವಿಚಾರವಾಗಿಯೇ ಸಾಕಷ್ಟು ಚರ್ಚೆಯಲ್ಲಿತ್ತು. ಇದೀಗ ಚಿತ್ರದ ನಾಯಕಿಯ ಲುಕ್ ಬಿಡುಗಡೆಯಾಗಿದ್ದು, ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
'ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ ಕಸ್ತೂರಿ ಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ’ ಎಂದು ಆ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಶಾನ್ವಿ.
ಫಸ್ಟ್ ಲುಕ್ನಲ್ಲಿ ಒಂದಷ್ಟು ಕುತೂಹಲಗಳ ಜತೆಗೆ ಬಂದಿರುವ ನಿರ್ದೇಶಕ ದಿನೇಶ್ ಬಾಬು, ಶೀರ್ಷಿಕೆಗೆ ತಕ್ಕಂತೆ ಭವ್ಯವಾದ ಮಹಲ್ವೊಂದನ್ನು ಪೋಸ್ಟರ್ನಲ್ಲಿ ಕಾಣಿಸಿದ್ದಾರೆ. ಇನ್ನೇನು ಅಕ್ಟೋಬರ್ ಮೊದಲ ವಾರದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಇನ್ನುಳಿದ ತಾರಾಗಣದ ಆಯ್ಕೆಯೂ ಮುಗಿದಿದೆ.