ಪ್ರಗತಿಪರ ರೈತನಾದ ವಿಜಯ್​ ರಾಘವೇಂದ್ರ; ಮಾರ್ಚ್​ 3ಕ್ಕೆ 'ಕಾಸಿನಸರ' ಬಿಡುಗಡೆ

Kaasina Sara 2 - New
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್​ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವಿಜಯ್​ ರಾಘವೇಂದ್ರ, ಈಗ ಗ್ರಾಮೀಣ ಸೊಗಡಿನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದೇ 'ಕಾಸಿನಸರ'. ಈ ಚಿತ್ರವು ಮಾರ್ಚ್​​ 3ಕ್ಕೆ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ.

ಈ ಹಿಂದೆ 'ಹೆಬ್ಬೆಟ್ ರಾಮಕ್ಕ' ಚಿತ್ರವನ್ನು ನಿರ್ದೇಶಿಸಿದ್ದ ಎನ್.ಆರ್. ನಂಜುಂಡೇಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದು, ದೊಡ್ಡನಾಗಯ್ಯ ನಿರ್ಮಿಸಿದ್ದಾರೆ. ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥೆ ಇರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ವಿಜಯ್​ ರಾಘವೇಂದ್ರ, 'ಈ ಸಿನಿಮಾ ಹಲವಾರು ಅಂಶಗಳಿಂದ ಜನರಿಗೆ ಇಷ್ಟವಾಗುತ್ತದೆ. ಈ ತರಹದ ಬದುಕೂ ಇದೆ, ಇದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಎಂದು ನಾಡಿನ ಜನರಿಗೆ ಹೇಳುವ ಚಿತ್ರ ಇದು. ಈ ವಿಷಯವನ್ನು ನಿರ್ದೇಶಕರು ಎಮೋಷನಲ್ ಆಗಿ ಹೇಳಹೊರಟಿದ್ದಾರೆ. ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ. ಈ ಚಿತ್ರದಲ್ಲಿ ಸುಂದರೇಶ ಎಂಬ ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ' ಎಂದರು.

ನಾಯಕಿ ಹರ್ಷಿಕಾ ಪೂಣಚ್ಛ ಅಭಿನಯದ ಚಿತ್ರವೊಂದು ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆಯಂತೆ. 'ಈ ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದೇನೆ. ಪದವೀಧರಳಾದರೂ ಗಂಡನಿಗೆ ಬೆಂಬಲವಾಗಿ ನಿಲ್ಲುವ ಪಾತ್ರ ನನ್ನದು. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ' ಎಂದರು.

ನಿರ್ದೇಶಕ ನಂಜುಂಡೇಗೌಡ ಮಾತನಾಡಿ, 'ಇಲ್ಲಿ ಕಾಸಿನ ಸರಕ್ಕೆ ಅದರದೇ ಆದ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಸಾಂಪ್ರದಾಯಿಕ, ಸಾವಯುವ ಕೃಷಿಯನ್ನು ಬಿಟ್ಟರೆ ಮುಂದೆ ನಮಗೆಲ್ಲ ಬಹುದೊಡ್ಡ ಅಪಾಯ ಕಾದಿದೆ ಎನ್ನುವುದು ಈಗಾಗಲೆ ಸಾಬೀತಾಗಿದೆ. ನಮ್ಮ ಮಣ್ಣನ್ನು ರಕ್ಷಿಸಿಕೊಳ್ಳಬೇಕಾಗಿದೆ' ಎಂದು ಹೇಳಿದರು.

'ಕಾಸಿನಸರ' ಚಿತ್ರದಲ್ಲಿ ಅಶ್ವತ್ಥ್​ ನೀನಾಸಂ, ಉಮಾಶ್ರೀ, ಸಂಗೀತಾ, ಸುಧಾ ಬೆಳವಾಡಿ, ಹನುಮಂತೇಗೌಡ ಮುಂತಾದವರು ನಟಿಸಿದ್ದು, ವೇಣು ಅವರ ಛಾಯಾಗ್ರಹಣ ಮತ್ತು ಶ್ರೀಧರ್​ ಸಂಭ್ರಮ್​ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net