ಕಾಲಿವುಡ್‌ಗೆ ಕನ್ನಡತಿ ಕಾಶಿಮಾ; ತಮಿಳಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪತ್ರಕರ್ತೆಯಾದ ನಟಿ

Kashima rafi
Published on

| ಹರ್ಷವರ್ಧನ್ ಬ್ಯಾಡನೂರು

ಕಳೆದ ವರ್ಷ ತೆರೆಗೆ ಬಂದ ತೆಲುಗಿನ ‘ಕಲಾಪುರಂ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕನ್ನಡದ ಹುಡುಗಿ ಕಾಶಿಮಾ ರಫಿ, ‘ಕಸ್ತೂರಿ ಮಹಲ್’ ಸಿನಿಮಾ ಮುಖೇನ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಈ ವರ್ಷ ‘ಟೆಂಪರ್’ ಹಾಗೂ ‘ಸೌತ್ ಇಂಡಿಯನ್ ಹೀರೋ’ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿರುವ ಅವರು ಇದೀಗ ತಮಿಳು ಚಿತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ.

‘‘ಸೌತ್ ಇಂಡಿಯನ್ ಹೀರೋ’ ಸಿನಿಮಾದ ಹಾಡೊಂದು ವೈರಲ್ ಆಗಿತ್ತು. ನಾಯಕ ಸಾರ್ಥಕ್ ಕೆಲವು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದ ಕಾರಣ, ಅಲ್ಲಿಯೂ ಹಾಡಿಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಹಾಡಿನಲ್ಲಿ ನೋಡಿ ತಮಿಳು ನಿರ್ದೇಶಕರು ಕರೆ ಮಾಡಿದರು. ಆಡಿಷನ್‌ನಲ್ಲಿ ಆಯ್ಕೆಯಾದೆ. ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡುವವರೆಗೂ ನಾನು ಚಿತ್ರತಂಡದ ಬಗ್ಗೆ ಹೆಚ್ಚೇನೂ ಹೇಳಲಾರೆ. ಆದರೆ, ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡದ ಹಲವು ಘಟಾನುಘಟಿ ಕಲಾವಿದರು ನಟಿಸಲಿದ್ದಾರೆ. ಮುಂದಿನ ತಿಂಗಳು ಸಿನಿಮಾ ಪ್ರಾರಂಭವಾಗಲಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಕಾಶಿಮಾ.

ಅಂದಹಾಗೆ, ಅವರು ಆ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಜತೆಗೆ ತಲಾ ಒಂದು ಕನ್ನಡ ಹಾಗೂ ತೆಲುಗು ಚಿತ್ರದ ಮಾತುಕತೆ ನಡೆಯುತ್ತಿರುವುದಾಗಿಯೂ ಹೇಳಿಕೊಳ್ಳುತ್ತಾರೆ. ‘ನಾನು ನಟಿಸಿದ ಮೊದಲ ಸಿನಿಮಾ ತೆಲುಗು. ಸೆಟ್‌ನಲ್ಲಿಯೇ ಮಾತನಾಡುತ್ತಾ ತೆಲುಗು ಭಾಷೆಯನ್ನು ಕಲಿತೆ. ಇದೀಗ ಈ ತಮಿಳು ಚಿತ್ರಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಭಾಷೆಯ ಮೇಲೆ ಹಿಡಿತ ಸಾಧಿಸಲು ನಿರ್ದೇಶಕರು ಹೇಳಿರುವ ಕೆಲವು ತಮಿಳು ಸಿನಿಮಾಗಳನ್ನು ನೋಡುತ್ತಿದ್ದೇನೆ. ಸ್ವಲ್ಪ ಮಟ್ಟಿಗೆ ಭಾಷೆ ಕಲಿತಿದ್ದೇನೆ’ ಎನ್ನುತ್ತಾರೆ ಕಾಶಿಮಾ ರಫಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net