

ಹೈದರಾಬಾದ್: ತೆಲುಗು ಬಿಗ್ಬಾಸ್ ರಿಯಾಲಿಟಿ ಶೋನ 7ನೇ ಆವೃತ್ತಿಯಲ್ಲಿ ತನ್ನದೇಯಾದ ಮ್ಯಾನರಿಸಂ ಮತ್ತು ಸ್ಪರ್ಧೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದ ಕನ್ನಡತಿ ಶೋಭಾ ಶೆಟ್ಟಿ 14 ವಾರದ ಬಳಿಕ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ರಗಡ್ ಲೇಡಿಯಾಗಿ ಅಬ್ಬರಿಸಿದ್ದ ಶೋಭಾ, ಫೈನಲ್ ಹಂತಕ್ಕೇರುವ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಅಲ್ಲದೆ, ಫೈನಲ್ನಲ್ಲಿಯೂ ಗೆಲ್ಲಬಹುದು ಎಂದು ಊಹಿಸಲಾಗಿತ್ತು. ಅನೇಕ ಬಾರಿ ಎಲಿಮಿನೇಟ್ ಆದರೂ ಮೊದಲು ಉಳಿಯುತ್ತಿದ್ದದ್ದು ಮಾತ್ರ ಶೋಭಾ. ಎಲ್ಲ ಟಾಸ್ಕ್ಗಳಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ ಎಲ್ಲ ಜನರ ಮನಸ್ಸನ್ನು ಸೆಳೆದಿದ್ದರು. ಆದರೆ, ಶೋಭಾರ ಎಲಿಮಿನೇಶನ್ ಅನೇಕರಿಗೆ ಅಚ್ಚರಿ ಜತೆಗೆ ಆಘಾತವನ್ನು ಉಂಟುಮಾಡಿದೆ.
ಬಿಗ್ಬಾಸ್ ಮನೆಯಲ್ಲಿ ಲೇಡಿ ಡಾನ್ನಂತೆ ಇದ್ದರು. ಶೋಭಾ ಜತೆ ಮಾತನಾಡಲು ಬಿಗ್ಬಾಸ್ ಮನೆಯಲ್ಲಿ ಅನೇಕ ಮಂದಿ ಹೆದರುತ್ತಿದ್ದರು. ಯಾರು ಏನೇ ಅಂದರು ಶೋಭಾ ಅದಕ್ಕೆ ಖಡಕ್ ಆಗಿ ಕೌಂಟರ್ ಕೊಡುತ್ತಿದ್ದರು. ಅವರ ಬಿಗ್ಬಾಸ್ ವಿಡಿಯೋ ತುಣುಕುಗಳು ತೆಲುಗು ಮಂದಿಗೆ ಮಾತ್ರವಲ್ಲ ಕನ್ನಡಿಗರನ್ನೂ ಸೆಳೆದಿವೆ. ಸಾಮಾಜಿಕ ಜಾಲತಾಣದಲ್ಲಿ ಶೋಭಾ ಬಗ್ಗೆ ಸಾಕಷ್ಟು ಮೆಚ್ಚುಗೆ ಮಾತುಗಳು ಸಹ ವ್ಯಕ್ತವಾಗುತ್ತಿವೆ.
ಇದೀಗ ಶೋಭಾ ಬಗ್ಗೆ ಹೊಸ ಕೂಗೊಂದು ಕೇಳಿಬಂದಿದೆ. ಅದೇನೆಂದರೆ, ತೆಲುಗು ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿರುವ ಶೋಭಾರನ್ನು ಕನ್ನಡ ಬಿಗ್ಬಾಸ್ ಕರೆತರಲು ಆಗ್ರಹಿಸಲಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕನ್ನಡ ಬಿಗ್ಬಾಸ್ ಶೋಗೆ ಶೋಭಾರನ್ನು ಕರೆತನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಆಯೋಜಕರನ್ನು ಒತ್ತಾಯಿಸಲಾಗಿದೆ.
ಶೋಭಾರನ್ನು ಕರೆತಂದರೆ ಎಲ್ಲರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸಂಗೀತಾ ಶೃಂಗೇರಿ ಕೌಂಟರ್ ಕೊಡಲು ಶೋಭಾರಿಂದ ಮಾತ್ರ ಸಾಧ್ಯ. ನಮ್ಮ ಚಮಚಾಗಳಿದ್ದಾರೆ ಮತ್ತು ಬಳೆ ಹಿಡ್ಕೊಂಡು ಕಿರುಚುವವರಿದ್ದಾರೆ. ಇವರಿಗೆಲ್ಲ ಕೌಂಟರ್ ಕೊಡಲು ಕನ್ನಡ ಬಿಗ್ಬಾಸ್ಗೆ ಶೋಭಾ ಬರಬೇಕು. ಬಂದರೆ, ಶೋ ಇನ್ನೂ ಮಜವಾಗಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಕಲರ್ಸ್ ಕನ್ನಡವನ್ನು ಆಗ್ರಹಿಸಿದ್ದಾರೆ.
ಅಂದಹಾಗೆ ಶೋಭಾ ಶೆಟ್ಟಿ ಅವರು ಕಳೆದ ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗಡೆ ಬಂದಿದ್ದಾರೆ. ಸ್ಪರ್ಧಿ ಅರ್ಜುನ್ ಈಗಾಗಲೇ ಫೈನಲ್ ತಲುಪಿದ್ದಾರೆ. ಇವರೊಂದಿಗೆ ಪ್ರಿಯಾಂಕಾ, ಪ್ರಶಾಂತ್, ಅಮರ್ದೀಪ್, ಯವರ್ ಮತ್ತು ಶಿವಾಜಿ ಕೂಡ ಫೈನಲ್ ಪ್ರವೇಶ ಪಡೆದಿದ್ದಾರೆ. ಮಾಮೂಲಿಯಾಗಿ ಐದು ಮಂದಿ ಫೈನಲ್ನಲ್ಲಿ ಇರುತ್ತಾರೆ. ಆದರೆ, ಈ ಬಾರಿ 6 ಮಂದಿ ಫೈನಲ್ ಸುತ್ತಿಗೇರಿದ್ದಾರೆ. ಫೈನಲ್ ಹೊಸ್ತಿಲಿನಲ್ಲಿ ಎಲಿಮಿನೇಟ್ ಆದ ಶೋಭಾ ಶೆಟ್ಟಿ ವೇದಿಕೆ ಮೇಲೆಯೇ ಕಣ್ಣೀರಿಟ್ಟರು. ಆದರೂ, ಉಳಿದವರಿಗೆ ಆಲ್ ದಿ ಬೆಸ್ಟ್ ಹೇಳಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ಶೋಭಾಗೆ ಸಿಕ್ಕ ಸಂಭಾವನೆ ಎಷ್ಟು?
ಶೋಭಾ ಅವರ ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 14 ವಾರಗಳ ಕಾಲ ಮನೆಯಲ್ಲಿದ್ದ ಶೋಭಾಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಮೂಲಗಳ ಪ್ರಕಾರ ಶೋಭಾ ವಾರಕ್ಕೆ 2.5 ಲಕ್ಷ ರೂ.ನಂತೆ 14 ವಾರಕ್ಕೆ 35 ಲಕ್ಷ ರೂ. ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಶೋ ಆಯೋಜಕರಾಗಲಿ ಅಥವಾ ಶೋಭಾ ಶೆಟ್ಟಿಯಾಗಲಿ ಅಧಿಕೃತವಾಗಿ ಹೇಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಹರಿದಾಡುತ್ತಿದೆ. ಆಪ್ತ ಮೂಲಗಳು ತಿಳಿಸಿವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)