ಓಟಿಟಿಯಲ್ಲಿ ಕರ್ಣನ್ ಬಿಡುಗಡೆ ಯಾವಾಗ ಅಂತ ಕೊನೆಗೂ ಗೊತ್ತಾಯ್ತು …

Karnan - Final
Published on

ಚೆನ್ನೈ: ಧನುಶ್​ ಅಭಿನಯದ ತಮಿಳು ಚಿತ್ರ ಕರ್ಣನ್​ ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಏಪ್ರಿಲ್​ 09ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯೂ ವ್ಯಕ್ತವಾಯಿತು. ಈ ಮಧ್ಯೆ, ಕೆಲವು ಕಡೆ ಕರೊನಾ ಎರಡನೇ ಅಲೆಯಿಂದಾಗಿ ಕೆಲವು ಕಡೆ ಚಿತ್ರಪ್ರದರ್ಶನ ನಿಂತಿತು. ಈ ಸಂದರ್ಭದಲ್ಲಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಯಾವಾಗ ಮತ್ತು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.

ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಮೇ 14ರಂದು ಕರ್ಣನ್​ ಚಿತ್ರವು ಅಮೇಜಾನ್​ ಪ್ರೈಮ್​ನಲ್ಲಿ ಬಿಡಗುಡೆಯಾಗಲಿದೆ ಎಂಬ ಸುದ್ದಿಯೊಂದು ಬಂದಿದೆ. ಮಾರಿ ಸೆಲ್ವರಾಜ್​ ನಿರ್ದೇಶನದ ಈ ಚಿತ್ರದಲ್ಲಿ ಧನುಶ್​ ಜತೆಗೆ ಮಲಯಾಳಂ ನಟಿ ರಜಿಶ್ಯಾ ವಿಜಯನ್, ಯೋಗಿ ಬಾಬು, ಲಾಲ್​ ಮುಂತಾದವರು ನಟಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಅಮೇಜಾನ್​ ಪ್ರೈಮ್​ನಲ್ಲಿ ಹಲವು ಹೊಸ ಚಿತ್ರಗಳು ಬಿಡುಗಡೆಯಾಗಿವೆ. ಪುನೀತ್​ ರಾಜಕುಮಾರ್​ ಅಭಿನಯದ ಯುವರತ್ನ, ದರ್ಶನ್​ ಅಭಿನಯದ ರಾಬರ್ಟ್​​, ಪರಿಣಿತಿ ಚೋಪ್ರಾ ಅಭಿನಯದ ಸೈನಾ, ಜಾನ್​ ಅಬ್ರಹಾಂ ಅಭಿನಯದ ಮುಂಬೈ ಸಾಗಾ, ಕಾರ್ತಿ ಅಭಿನಯದ ಸುಲ್ತಾನ್​ ಮುಂತಾದ ಹಲವು ಚಿತ್ರಗಳು ಬಿಡುಗಡೆಯಾಗಿವೆ.

ಈ ಸಾಲಿಗೆ ಇದೀಗ ಕರ್ಣನ್​ ಸಹ ಸೇರಿಕೊಂಡಿದೆ. ವಿಶೇಷವೆಂದರೆ, ಮೇ 13ರಂದು ಸಲ್ಮಾನ್​ ಖಾನ್​ ಅಭಿನಯದ ರಾಧೇ ಚಿತ್ರವು ಬಿಡುಗಡೆಯಾಗುತ್ತಿದ್ದು, ಅದರ ಮರುದಿನವವೇ ಕರ್ಣನ್​ ಸಹ ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net