ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ

Kari Haida Kari Ajja 15
Published on

ಬೆಂಗಳೂರು: ದೈವದ ಕುರಿತಾದ 'ಕಾಂತಾರ' ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಕನ್ನಡದಲ್ಲಿ ದೈವದ ಕುರಿತಾದ ಇನ್ನೊಂದು ಸಿನಿಮಾ ತಯಾರಾಗುತ್ತಿದೆ. ಅದೇ ‘ಕರಿ ಹೈದ ಕರಿ ಅಜ್ಜ’. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಈ ಚಿತ್ರವು ಪವಾಡ ಪುರುಷ ಕೊರಗಜ್ಜನ ಜೀವನವನ್ನಾಧರಿಸಿದ್ದು, ಸುಧೀರ್ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ.

ಈ ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ ಪಾತ್ರ ನಿರ್ವಹಿಸಿದ್ದಾರೆ. ಸಂದೀಪ್​ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿರುವುದು ವಿಶೇಷ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುಧೀರ್​ ಅತ್ತಾವರ್​, 'ಇದು ಕೊರಗಜ್ಜ ಎಂದು ಕರೆಯುವ 22-23 ವರ್ಷ ಬದುಕಿದ್ದ ತನಿಯ ಅಥವ ಕಾಂತಾರೆ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆ ಉಳ್ಳ ಚಿತ್ರ. ಇದರಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸಂದೀಪ್ ಸೋಪರ್ಕರ್, ಗುಳಿಗ ದೈವದ ಪಾತ್ರವಾನ್ನು ನಿಭಾಯಿಸಿದ್ದಾರೆ. ಇದು ಕೊರಗಜ್ಜನ ಜೊತೆಗೆ ಇರುವ ಗುಳಿಗ. ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ 'ಕಲ್ಲಾಪು ಬೂರ್ದಗೋಳಿ' ಬಳಿ ಕೊರಗಜ್ಜನ ಜೊತೆ ಗುಳಿಗ ದೈವವೂ ಇದೆ' ಎನ್ನುತ್ತಾರೆ.

ಈ ಮೊದಲು ಕೊರಗಜ್ಜನ ಕುರಿತು ಚಿತ್ರ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದರಂತೆ. 'ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು, ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಜನ ಆರಾಧಿಸುತ್ತಾರೆ' ಎನ್ನುತ್ತಾರೆ.

ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಸಂದೀಪ್​ ಸೋಪರ್ಕರ್​, 'ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಇದರಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದು, ಮಿಕ್ಕಂತೆ ಭರತ್ ಸೂರ್ಯ, ಶ್ರುತಿ, ಭವ್ಯ ಮುಂತಾದವರು ನಟಿಸಿದ್ದಾರೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net