

ಮುಂಬೈ: ಬಾಲಿವುಡ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ. ಕೆಲವು ವರ್ಷಗಳ ಹಿಂದೆ 'ವೀರೇ ದಿ ವೆಡ್ಡಿಂಗ್' ಎಂಬ ಚಿತ್ರ ಬಂದಿತ್ತು. ಕರೀನಾ ಕಪೂರ್, ಸೋನಂ ಕಪೂರ್, ಸ್ವತಾ ಭಾಸ್ಕರ್ ಮತ್ತು ಶಿಕಾ ತಲ್ಸಾನಿಯಾ ಎಂಬ ಚಿತ್ರ ಬಂದಿತ್ತು. ಈಗ ಅದೇ ಚಿತ್ರದ ನಿರ್ಮಾಪಕರಿಂದ ಇನ್ನೊಂದು ಹೊಸ ಚಿತ್ರ ಶುರುವಾಗಲಿದ್ದು, ಇದರಲ್ಲಿ ತಬು, ಕರೀನಾ ಕಪೂರ್ ಮತ್ತು ಕೃತಿ ಸನಾನ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.
ಬಾಲಿವುಡ್ನ ಮೂರು ತಲೆಮಾರಿನ ಮೂವರು ಜನಪ್ರಿಯ ನಟಿಯರನ್ನು ಒಂದೇ ಚಿತ್ರದಲ್ಲಿ ಸೇರಿಸುವ ಪ್ರಯತ್ನ ಇದುವರೆಗೂ ಆಗಿರಲಿಲ್ಲ. ಇದೀಗ 'ದಿ ಕ್ರೂ' ಎಂಬ ಹೊಸ ಚಿತ್ರದಲ್ಲಿ ಆಗುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವ ಮೂವರು ಮಹಿಳೆಯರ ಕಥೆ ಇದಾಗಿರಲಿದೆಯಂತೆ. 'ವೀರೆ ದಿ ವೆಡ್ಡಿಂಗ್' ಚಿತ್ರವ್ನು ನಿರ್ಮಿಸಿದ್ದ ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರಂತೆ.
'ವೀರೇ ದಿ ವೆಡ್ಡಿಂಗ್' ಚಿತ್ರದ ನಂತರ ಆ ಚಿತ್ರಕ್ಕೆ ಕಥೆ ಬರೆದ ತಂಡವೇ ಈ ಚಿತ್ರದ ಕಥೆ ರೆಡಿ ಮಾಡಿಕೊಂಡಿತಂತೆ. ಮೊದಲು ಕರೀನಾ ಕಪೂರ್ ಅವರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪುತ್ತಿದ್ದಂತೆಯೇ ಕೃತಿ ಮತ್ತು ತಬು ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಮೂವರಿಗೂ ಗ್ಲಾಮರಸ್ ಪಾತ್ರಗಳು ಇವೆಯಂತೆ.
ಅಂದಹಾಗೆ, 'ದಿ ಕ್ರೂ' ಚಿತ್ರದ ಚಿತ್ರೀಕರಣ 2023ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ವರ್ಷವೇ ಚಿತ್ರ ಬಿಡುಗಡೆಯಾಗಲಿದೆ.