

ಮುಂಬೈ: ಈ ವರ್ಷದ ಫೆಬ್ರವರಿಯಲ್ಲಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ ಕರೀನಾ, ಅದಾಗಿ ಒಂದು ತಿಂಗಳಲ್ಲೇ ಕ್ಯಾಮೆರಾ ಮುಂದೆ ನಿಂತಿದ್ದತು. ಮೊದಲು, ಓಟಿಟಿವೊಂದರ ಹೊಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರೀನಾ, ಆ ನಂತರ ಒಂದಿಷ್ಟು ಜಾಹೀರಾತುಗಳಲ್ಲೂ ನಟಿಸಿದ್ದರು. ಇದೀಗ ಅವರು ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಕರೀನಾ ಹೊಸ ಚಿತ್ರ ಒಪ್ಪಿಕೊಂಡರಾ ಎಂಬ ಪ್ರಶ್ನೆಯೊಂದು ಬರಬಹುದು. ಹಾಗೇನಿಲ್ಲ, ಎರಡು ವರ್ಷಗಳ ಹಿಂದೆಯೇ ಆಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಟಿಸುವುದಕ್ಕೆ ಕರೀನಾ ಒಪ್ಪಿದ್ದು ಗೊತ್ತೇ ಇದೆ. ಕಳೆದ ವರ್ಷದ ಡಿಸೆಂಬರ್ ಹೊತ್ತಿಗೆ ಕರೀನಾ, ತಮ್ಮ ಭಾಗದ ಬಹುತೇಕ ಕೆಲಸವನ್ನು ಮುಗಿಸಿದ್ದರು. ಇದೀಗ ಚಿತ್ರ ಸಹ ಕೊನೆಯ ಹಂತಕ್ಕೆ ಬಂದಿದ್ದು, ಪ್ಯಾಚ್‌ವರ್ಕ್ ಚಿತ್ರೀಕರಣ ನಡೆಯುತ್ತಿದೆ. ಮುಂಬೈನ ಅಂಧೇರಿಯಲ್ಲಿ ಈ ಕೊನೆಯ ಹಂತದ ಚಿತ್ರೀಕರಣದಲ್ಲಿ ಕರೀನಾ, ಆಮೀರ್ ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಅಲ್ಲಿಗೆ ಗುಟ್ಟಾಗಿ ಹೋದ ಪಾಪರಾಜಿಗಳು, ಚಿತ್ರೀಕರಣ ಸಂದರ್ಭದಲ್ಲಿ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ತಂದಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರವು ಕ್ರಿಸ್ಮಸ್ ವೇಳೆ ಬಿಡುಗಡೆಯಾಗಲಿದೆ ಎಂದು ಕಳೆದ ವರ್ಷವೇ ಘೋಷಣೆಯಾಗಿದೆ. ಈ ಚಿತ್ರದಲ್ಲಿ ಆಮೀರ್ ಮತ್ತು ಕರೀನಾ ಅಲ್ಲದೆ, ಶಾರೂಖ್ ಖಾನ್ ಮತ್ತು ತೆಲುಗು ನಟ ನಾಗಚೈತನ್ಯ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.