ಕಳೆದ ಬಾರಿ ಮಾಡಿದ ತಪ್ಪು ಈ ಬಾರಿ ಮಾಡಲ್ಲ ... ಕರೀನಾ ಮಾತಿನ ಮರ್ಮವೇನು?

Kareena Kapoor - Final
Published on

ಕೆಲವು ದಿನಗಳ ಹಿಂದಷ್ಟೇ ಕರೀನಾ ಕಪೂರ್​ ತಾವು ಎರಡನೆಯ ಬಾರಿಗೆ ತಾಯಿಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಕರೀನಾ ಎರಡನೆಯ ಮಗುವಿಗೆ ತಾಯಿಯಾಗಲಿದ್ದಾರೆ.

ಈ ಮಧ್ಯೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಬಾರಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟಕ್ಕೂ ಕರೀನಾ ಅಂಥದ್ದೇನು ತಪ್ಪು ಮಾಡಿಬಿಟ್ಟರು ಎಂಬ ಪ್ರಶ್ನೆ ಬರಬಹುದು.

ಕರೀನಾ ಹೇಳುವಂತೆ, ಕಳೆದ ಬಾರಿ ಎಲ್ಲರೂ ಅವರಿಗೆ ತಿನ್ನಿಸಿ ತಿನ್ನಿಸಿ ವಿಪರೀತ ತೂಕ ಹೆಚ್ಚುವಂತಾಯಿತಂತೆ. 'ಮೊದಲ ಬಾರಿಗೆ ಬಾಣಂತಿ ಬೇರೆ. ಎಲ್ಲರೂ ಪ್ರೀತಿಯಿಂದ ಅದು ತಿನ್ನು, ಇದು ತಿನ್ನು ಎಂದು ವಿಪರೀತ ತಿನ್ನಿಸಿದರು. ಬೇಸನ್​ ಲಾಡು, ಪರಾಠ, ತುಪ್ಪ ತಿನ್ನಿಸಿ 25 ಕೆಜಿ ತೂಕ ಹೆಚ್ಚಿಸಿದ್ದರು. ಮಗುವಾದ ಮೇಲೆ ವಾಪಸ್ಸು ತೂಕ ಇಳಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿ ಹೋಯಿತು' ಎನ್ನುತ್ತಾರೆ ಅವರು.

ಅದೇ ಕಾರಣಕ್ಕೆ ಈ ಬಾರಿ ಅವರು ಸಾಕಷ್ಟು ಮುನ್ನೆಚರಿಕೆಗಳನ್ನು ತೆಗೆದುಕೊಂಡಿದ್ದಾರಂತೆ. ಅದರಲ್ಲೂ ಈ ಬಾರಿ ಕರೊನಾ ಹಾವಳಿ ಹೆಚ್ಚಿರುವುದರಿಂದ, ಸಾಧ್ಯವಾದಷ್ಟೂ ಮಿತಿಯಾಗಿ ಮತ್ತು ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುವುದಕ್ಕೆ ಕರೀನಾ ನಿರ್ಧರಿಸಿದ್ದಾರೆ.

'ಈ ಬಾರಿ ನಮ್ಮ ಡಾಕ್ಟರ್​ ಸಹ ಹೇಳಿದ್ದಾರೆ. ನೋಡು, ನೀನು ಇಬ್ಬರಿಗೆ ತಿನ್ನುವ ಅವಶ್ಯಕತೆ ಇಲ್ಲ. ನಿನಗೆ ಎಷ್ಟು ಬೇಕೋ ಅಷ್ಟು ತಿನ್ನು. ಆರೋಗ್ಯಕರ ಆಹಾರ ತಿಂದು ಸೇಫ್​ ಆಗಿರು ಅಂತ ವೈದ್ಯರು ಸಲಹೆ ನೀಡಿದ್ದಾರೆ. ಅವರ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇನೆ' ಎನ್ನುತ್ತಾರೆ ಕರೀನಾ ಕಪೂರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net