

ಬೆಂಗಳೂರು: ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಇತ್ತೀಚೆಗಷ್ಟೇ ಆನೆ ವಿಚಾರಕ್ಕೆ ಸುದ್ದಿಯಾಗಿದ್ದರು. ಮೈಸೂರು ಮೃಗಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಆ ಕೆಲಸವನ್ನು ಅವರ ಅಭಿಮಾನಿಗಳೂ ಮುಂದುವರಿಸಿದ್ದಾರೆ.
ಬೆಂಗಳೂರಿನ ಶಿವು ಅಡ್ಡ ಸಂಘದ ಸಾಕಷ್ಟು ಅಭಿಮಾನಿಗಳು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಚ್ಚಿನ ನಟನ ಕಾರ್ಯವನ್ನೇ ಅನುಸರಿಸಲು ಮುಂದಾಗಿದ್ದಾರೆ. ಇದೇ ಭಾನುವಾರ ಒಂದಷ್ಟು ಅಭಿಮಾನಿಗಳೆಲ್ಲ ಒಟ್ಟಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ಆ ಕಾರ್ಯಕ್ಕೆ ಇಳಿಯುವ ಮುನ್ನ ಬೃಹತ್ ಬ್ಯಾನರ್ವೊಂದನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಶಿವಣ್ಣ ಅವರ ಸ್ಫೂರ್ತಿಯಿಂದ ಎಂದು ಬರೆಯಲಾಗಿದೆ. ಅಭಿಮಾನಿಗಳ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಾವೂ ಕೈಜೋಡಿಸುವುದಾಗಿ ಸಾಕಷ್ಟು ಮಂದಿ ಹೇಳಿದ್ದಾರೆ.
ಅಂದಹಾಗೆ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಆಗಸ್ಟ್ 20ರಿಂದ 2021ರ ಆಗಸ್ಟ್ 19ರ ವರೆಗೂ ಪಾರ್ವತಿ ಹೆಸರಿನ ಹೆಣ್ಣು ಆನೆಯನ್ನು ದತ್ತು ಪಡೆದಿದ್ದಾರೆ. ಅದರ ಆರೈಕೆಗೆ ಒಟ್ಟು 75 ಸಾವಿರ ರೂ ಮೊತ್ತ ನೀಡಿದ್ದಾರೆ. ಈ ವಿಚಾರವನ್ನು ಪ್ರಾಣಿ ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವ ಕೆಲಸ ಇದೇ ಮೊದಲೇನಲ್ಲ. ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದರು. ನಟ ಚಿಕ್ಕಣ್ಣ ಸೇರಿ ಕ್ರಿಕೆಟರ್ ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಅನಿಲ್ ಕುಂಬ್ಳೆ ಹಾಗೂ ಹಲವು ರಾಜಕಾರಣಿಗಳೂ ಸಂಗ್ರಹಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.