

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಒಂದೇ ಟೇಕ್ ನಲ್ಲಿ ಚಿತ್ರೀಕರಣವಾಗಿದ್ದ "ಯಂಗ್ ಮ್ಯಾನ್" ಚಿತ್ರದ ನಿರ್ದೇಶಕ ಮುತ್ತುರಾಜ್ ಆ್ಯಕ್ಷನ್-ಕಟ್ ಹೇಳುತ್ತಿರುವ ಹೊಸ ಚಿತ್ರ "ಲಿಪ್ ಲಾಕ್". ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ’ಎಲ್ಲರೂ ಅಂದುಕೊಂಡಿರುವ "ಲಿಪ್ ಲಾಕ್" ಬೇರೆ. ಆದರೆ "ಲಿಪ್ ಲಾಕ್" ನಿಜವಾದ ಅರ್ಥ ಬೇರೆ’ ಎನ್ನುವ ನಿರ್ದೇಶಕ ಮುತ್ತುರಾಜ್, ‘ಇದೊಂದು ಪರಿಶುದ್ಧ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ‘ ಎಂದು ಮಾಹಿತಿ ನೀಡುತ್ತಾರೆ.
ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ಅವರಿಗೆ ದೀಪ, ಜಗದೀಶ್, ಸೃಷ್ಟಿ , ನಿಹಾರಿಕಾ ನಾಯಕಿಯರಾಗಿದ್ದಾರೆ. ಜತೆಗೆ ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಉಳಿದಂತೆ ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ.
‘ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‘ ಎಂದರು ನಟ ಕರಣ್ ಆರ್ಯನ್. ‘ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. "ಬ್ಯಾಡ್ ಮ್ಯಾನರ್ಸ್" ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ‘ ಎಂದರು"ಪದ್ಮಾವತಿ " ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್.