

ಬೆಂಗಳೂರು: ಸಂಪೂರ್ಣ ಹೊಸಬರೇ ಸೇರಿಕೊಂಡು ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ತಯಾರಾಗಿವೆ. ಆ ಪೈಕಿ 'ಕಪೋ ಕಲ್ಪಿತಂ' ಎಂಬ ಚಿತ್ರವೂ ಒಂದು. ಈಗಾಗಲೇ ಸಂಪೂರ್ಣವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ನಾಯಕಿಯಾಗಿ ಕಾಣಿಸಿಕೊಂಡಿರುವವರು ಸುಮಿತ್ರಾ ರಮೇಶ್ ಗೌಡ. ಅವರಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ನಾನಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕೃತ ಪದಗಳಾಗಿದ್ದು, ಸ್ವಯಂ ಕಲ್ಪನೆ ಎಂಬುದು ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಹಂಗಾಯ್ತು, ಹಿಂಗಾಯ್ತು ಎಂಬಂತೆ ಬಿಂಬಿತವಾಗುತ್ತದೆ. ಅದೇ ಅಂಶವನ್ನು ಇಟ್ಟುಕೊಂಡು ಈ ಕಥೆ ಮಾಡಿದ್ದೇವೆ' ಎನ್ನುತ್ತಾರೆ ಸುಮಿತ್ರಾ.
ಇದೊಂದು ಹಾರರ್ ಚಿತ್ರ ಎನ್ನುವ ಸುಮಿತ್ರಾ, 'ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತಾರೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಸಾರಾಂಶವಾಗಿದೆ' ಎನ್ನುತ್ತಾರೆ.
ಮಂಡ್ಯ ಮೂಲದ ಸುಮಿತ್ರಾ ರಮೇಶ್ ಗೌಡ ಈ ಹಿಂದೆ 'ಜಿಷ್ಣು' ಸಿನಿಮಾದಲ್ಲಿ ಪಾತ್ರ ಮಾಡುವ ಜತೆಗೆ ಸಹಾಯಕ ನಿರ್ದೇಶಕಿಯಾಗಿ ಅನುಭವ ಪಡೆದುಕೊಂಡಿದ್ದಾರೆ. ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕರಾಗಿ ಕಾಣಿಸಿಕೊಂಡರೆ, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಸಂದೀಪ್ ಮಲಾನಿ, ನಿರೂಪಕರಾಗಿ ಗೌರೀಶ್ ಅಕ್ಕಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ನಟ ಶಂಕರ್ನಾಗ್ರ ಈ ಹಿಂದಿ ಚಿತ್ರ ನೋಡಿದ್ದೀರಾ?
ಚಿತ್ರ ರೂಪುಗೊಳ್ಳುವಲ್ಲಿ ಗಣಿದೇವ್ ಕಾರ್ಕಳ ಅವರ ಪಾತ್ರ ದೊಡ್ಡದಿದೆ. ಚಿತ್ರಕಥೆ, ಸಂಭಾಷಣೆ ಬರೆಯುವುದರ ಜತೆಗೆ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿ, ಚಿತ್ರದ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವನ್ನು ಸುಮಿತ್ರಾ ಅವರ ತಂದೆ ರಮೇಶ್ ಚಿಕ್ಕೇಗೌಡ ನಿರ್ಮಿಸುತ್ತಿದ್ದಾರೆ.