

ಲಾಕ್ಡೌನ್ ನಂತರ ಕೆಲವು ರಾಜ್ಯಗಳಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್ಗೇನೋ ಅನುಮತಿ ನೀಡಲಾಗಿದೆ. ಆದರೆ, ಇದುವರೆಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈಗ ಅನುಮತಿ ಸಿಗುತ್ತಿದ್ದಂತೆಯೇ 'ದಿ ಕಪಿಲ್ ಶರ್ಮ ಶೋ' ಕಾರ್ಯಕ್ರಮಕ್ಕೆ ಚಿತ್ರೀಕರಣ ಪ್ರಾರಂಭವಾಗಿದೆ.
ಇಂದು ಬೆಳಿಗ್ಗೆಯಿಂದ ಈ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗಿದ್ದು, ಕಪಿಲ್ ಶರ್ಮ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನ ಮೂಲಕ, ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗುತ್ತಿರುವ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕಲಾವಿದರೆಲ್ಲಾ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕಿಂತ ಮುನ್ನ ಹಲವು ಪರೀಕ್ಷೆಗಳಿಗೆ ಒಳಪಡುತ್ತಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಸಿಗುವುದಕ್ಕಿಮತ ಮುನ್ನವೇ, ಕಪಿಲ್ ಶರ್ಮ ತಮ್ಮ ತಂಡದವರಿಗೆ ಚಿತ್ರೀಕರಣಕ್ಕೆ ರೆಡಿಯಾಗುವಂತೆ ಸೂಚನೆ ನೀಡಿದ್ದರು. ಕಲಾವಿದರೆಲ್ಲಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.. ಈಗಾಗಲೇ ಕಪಿಲ್, ಕೃಷ್ಣ ಅಭಿಷೇಕ್, ಭಾರತೀ ಸಿಂಗ್, ಚಂದನ್ ಪ್ರಭಾಕರ್, ಕಿಕು ಶಾರದಾ ಮುಂತಾದವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ರಿಹರ್ಸಲ್ ಸಹ ಶುರು ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಈ ಬಾರಿ ಸಹ ನಗುವುದಕ್ಕೆ ಮತ್ತು ನಗಿಸುವುದಕ್ಕೆ ಅರ್ಚನಾ ಪೂರಣ್ ಸಿಂಗ್, ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅದಲ್ಲದೆ ಪ್ರತಿ ಕಂತಿನಲ್ಲೂ ಒಂದೊಂದು ಚಿತ್ರತಂಡ ಅಥವಾ ಸೆಲೆಬ್ರಿಟಿ ವಿಶೇಷ ಅತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮೊದಲ ಅತಿಥಿಯಾಗಿ ಸೋನು ಸೂದ್ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಮನೋಜ್ ಬಾಜ್ಪೇಯಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅವರು ಸಹ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
'ದಿ ಕಪಿಲ್ ಶರ್ಮ' ಶೋನ ಚಿತ್ರೀಕರಣವೇನೋ ಶುರುವಾಗಿದೆ. ಆದರೆ, ಹೊಸ ಎಪಿಸೋಡು ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು, ಬಹುಶಃ ಆಗಸ್ಟ್ ಮೊದಲ ವಾರದಿಂದ ಹೊಸ ಕಂತುಗಳು ಪ್ರಸಾರವಾಗುವ ಸಾಧ್ಯತೆ ಇದೆ.