ರಿಷಭ್​ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರಕ್ಕೆ ಚಾಲನೆ ...

Kanthara - Final
Published on

ಬೆಂಗಳೂರು: ಹೊಂಬಾಳೆ ಫಿಲಂಸ್​ನಡಿ ವಿಜಯ್​ಕುಮಾರ್ ಕಿರಗಂದೂರು ನಿರ್ಮಾಣದಲ್ಲಿ ರಿಷಭ್​ ಶೆಟ್ಟಿ, 'ಕಾಂತಾರ' ಎಂಬ ಹೊಸ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಶುಕ್ರವಾರ ಈ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತವಾಗಿದೆ.

ಹೌದು, ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 2:21ರ ಶುಭಘಳಿಗೆಯಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ರಿಷಭ್​, ವಿಜಯ್​ ಕುಮಾರ್​ ಕಿರಗಂದೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

'ಕಾಂತಾರ' ಚಿತ್ರವನ್ನು ರಿಷಭ್​ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಚಿತ್ರದಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ 'ಪಾಪ್​ಕಾರ್ನ್​​ ಮಂಕಿ ಟೈಗರ್​' ಖ್ಯಾರಿಯ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಮಿಕ್ಕಂತೆ ಅಚ್ಯುತ್​ ಕುಮಾರ್​, ಕಿಶೋರ್​, ಪ್ರಮೋದ್​ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ.

ಶನಿವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕೆರಾಡಿ ಮತ್ತು ಹೆಮ್ಮಾಡಿ ಸುತ್ತಮುತ್ತ ನಡೆಯಲಿದೆ. ಈ ವರ್ಷಾಂತ್ಯದೊಳಗೆ ಚಿತ್ರೀಕರಣ ಮುಗಿಯಲಿದೆ. ಅಜನೀಶ್​ ಲೋಕನಾಥ್​ ಅವರ ಸಂಗೀತ ಮತ್ತು ಅರವಿಂದ್​ ಕಶ್ಯಪ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net