

ಬೆಂಗಳೂರು: ಎರಡು ತಿಂಗಳ ಹಿಂದೆಯೇ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಮುಗಿದಿತ್ತು. ‘ಕೆಜಿಎಫ್ 2’ ಜತೆಗೆ ಚಿತ್ರದ ಟೀಸರ್ ಸಹ ಬಿಡಗುಡೆಯಾಗಿತ್ತು. ಆದರೆ, ಚಿತ್ರದ ಬಿಡುಗಡೆ ಯಾವಾಗ ಎಂದು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಈಗ ಬಿಡುಗಡೆ ದಿನಾಂಕ ಘೋಷಿಸಲಾಗಿದ್ದು, ಸೆ. 30ರಂದು ದಸರಾ ಹಬ್ಬದ ಪ್ರಯುಕ್ತ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
‘ಕಾಂತಾರ’ ಚಿತ್ರವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಕಥೆಯಾಗಿದ್ದು, ರಿಷಬ್ ಜತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ರಿಷಬ್ ನಿರ್ದೇಶನದ ಜತೆಗೆ ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ. ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಈ ಚಿತ್ರದ ನಿರ್ವಪಕರು.
ಅಂದಹಾಗೆ, ದಸರಾ ಹಬ್ಬಕ್ಕೆ ‘ಕಾಂತಾರ’ ಒಂದೇ ಅಲ್ಲ, ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಹ ಬಿಡುಗಡೆಯಾಗುತ್ತಿದೆ. ಹಾಗೆ ನೋಡಿದರೆ, ಎರಡು ತಿಂಗಳ ಹಿಂದೆಯೇ ‘ಮಾರ್ಟಿನ್’ ಚಿತ್ರವನ್ನು ಸೆ.30ರಂದು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡದವರು ಘೋಷಿಸಿಕೊಂಡಿದ್ದರು. ಈಗ ‘ಮಾರ್ಟಿನ್’ ಜತೆಗೆ ‘ಕಾಂತಾರ’ ಸಹ ಬಿಡುಗಡೆಯಾಗುತ್ತಿದೆ. ಎರಡೂ ದೊಡ್ಡ ಚಿತ್ರಗಳದ್ದಾರಿಂದ ಪೈಪೋಟಿಯೂ ಜೋರಾಗಿರುತ್ತದೆ. ಈ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇದೆ.