ಕನ್ನಡಿಗರ ಹಿಂದಿ ಚಿತ್ರ ದಿ ಫಾಲನ್ ಓಟಿಟಿಯಲ್ಲಿ ಬಿಡುಗಡೆ ಪ್ರಯತ್ನ; ಕನ್ನಡಕ್ಕೂ ಡಬ್ ಆಗುವ ಸಾಧ್ಯತೆ

page 10 2
Published on

ಬೆಂಗಳೂರು: ಒಂದು ಚಿತ್ರವನ್ನು ಕನ್ನಡದಲ್ಲಿ ಮಾಡಿ, ನಂತರ ಹಿಂದಿ ಅಥವಾ ಬೇರೆ ಭಾಷೆಗೆ ಡಬ್ ಮಾಡುವುದು ವಾಡಿಕೆ. ಆದರೆ, ಇದೊಂದು ಕನ್ನಡಿಗರ ತಂಡ, ಹಿಂದಿಯಲ್ಲಿ ಚಿತ್ರ ಮಾಡಿ, ಅದನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿರುವುದಷ್ಟೇ ಅಲ್ಲ, ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ.

ಅಂಥದ್ದೊಂದು ಹೊಸ ಪ್ರಯೋಗ ಮಾಡುತ್ತಿರುವುದು ಅನುಪಮಾ ಗೌಡ ಅಭಿನಯದ ‘ದಿ ಫಾಲನ್’ ಚಿತ್ರತಂಡ. ಇದಕ್ಕೂ ಮುನ್ನ, ‘ಊರ್ವಿ’ ಸಿನಿಮಾ ನಿರ್ದೇಶಿಸಿದ್ದ ಪ್ರದೀಪ್ ವರ್ವ, ‘ದಿ ಫಾಲನ್’ ಎಂಬ ಹಿಂದಿ ಸಿನಿಮಾ ಮಾಡಿದ್ದಾರೆ. ಎಲ್ಲ ಸರಿಯಾಗಿಯೇ ನಡೆದಿದ್ದರೆ, ಜುಲೈ ವೇಳೆಗೆ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿತ್ತು. ಆದರೆ, ಕರೊನಾದಿಂದ ಸದ್ಯಕ್ಕೆ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿದೇಶದಲ್ಲಿ ನಡೆಯಬೇಕಿರುವುದರಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ಅದೂ ಸ್ಥಗಿತಗೊಂಡಿದೆ. ಹೀಗಿರುವಾಗಲೇ ಈ ಎಲ್ಲ ಪರಿಸ್ಥಿತಿಯನ್ನು ಅರಿತಿರುವ ನಿರ್ದೇಶಕರು, ಚಿತ್ರಮಂದಿರದ ಬದಲು ಆನ್​ಲೈನ್​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಹಾಕಿದ್ದಾರೆ.

ಹೌದು, ಇತ್ತೀಚಿನ ದಿನಗಳಲ್ಲಿ ಓಟಿಟಿ ವೇದಿಕೆ ವೇಗವಾಗಿ ಸಾಗುತ್ತಿದೆ. ಹೊಸ ಹೊಸ ಸಿನಿಮಾಗಳು ಚಿತ್ರಮಂದಿರವನ್ನು ಬದಿಗಿಟ್ಟು ನೇರವಾಗಿ ಆನ್​ಲೈನ್​ನಲ್ಲಿ ಬಿಡುಗಡೆಯಾಗುತ್ತಿವೆ. ಅದೇ ರೀತಿ ‘ದಿ ಫಾಲನ್’ ಚಿತ್ರವನ್ನೂ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ. ‘ಮೊದಲಿಗೆ ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವ ಪ್ಲಾನ್ ನಮ್ಮದಾಗಿತ್ತು. ಆದರೆ. ಸದ್ಯದ ಸ್ಥಿತಿ ನೋಡಿದರೆ, ಮುಂದಿನ ಒಂದು ವರ್ಷದ ಅವಧಿಗೆ ಚಿತ್ರಮಂದಿರಗಳು ಯಥಾಸ್ಥಿತಿಗೆ ಮರಳುವುದು ಕಷ್ಟ ಸಾಧ್ಯ. ಅದನ್ನು ಗಂಭೀರವಾಗಿ ಪರಿಗಣಿಸಿ ಓಟಿಟಿಯತ್ತ ಗಮನ ಹರಿಸಿದ್ದೇವೆ. ಈಗಾಗಲೇ ಅಮೆಜಾನ್, ನೆಟ್​ಫ್ಲಿಕ್ಸ್, ಜಿ5 ಸೇರಿ ಹಲವು ಓಟಿಟಿ ಸಂಸ್ಥೆಗಳನ್ನ ಸಂಪರ್ಕ ಮಾಡಿದ್ದೇವೆ. ಯಾರು ಒಳ್ಳೆಯ ಆಫರ್ ಕೊಡುತ್ತಾರೋ, ಅವರಿಗೆ ಚಿತ್ರ ಕೊಡಲಿದ್ದೇವೆ. ಇನ್ನು ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ’ ಎನ್ನುತ್ತಾರೆ ಪ್ರದೀಪ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net