

ಬೆಂಗಳೂರು: ನೈಜ ಘಟನೆಯ ಚಿತ್ರಗಳನ್ನು ಇಷ್ಟಪಡುವ ಜನರಿಗೆ ’ಪ್ರೇಮನ್’ ಚಿತ್ರವೊಂದು ಸಿದ್ದಗೊಂಡಿದೆ. ಮೊನ್ನೆಯಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ನ್ಯಾಷನಲ್ ಕಾಲೇಜ್‌ದಲ್ಲಿ 2000 ರಲ್ಲಿ ನಡೆದ ಘಟನೆಯನ್ನು ಕುಂದಾಪುರದಲ್ಲಿ ನಡೆದಂತೆ ಶೇಕಡ 90ರಷ್ಟು ತೋರಿಸಲಾಗಿದೆ. ಹೊರ ರಾಜ್ಯದಲ್ಲಿ ನಡೆದ ಅಂಶವನ್ನು ಕ್ಲೈಮಾಕ್ಸ್‌ಗೆ ಬಳಸಲಾಗಿದೆ. ಸೆಸ್ಪೆನ್ಸ್, ಥ್ರಿಲ್ಲರ್ ಕತೆಯಾಗಿರುವುದರಿಂದ ಚಿತ್ರದ ಸಾರವನ್ನು ಬಿಟ್ಟುಕೊಟ್ಟಿಲ್ಲ. ಅಡಿಬರಹದಲ್ಲಿ ಕೊನೆಯಾಗದ ಪ್ರೀತಿ ಎಂದು ಹೇಳಿಕೊಂಡಿರುವುದರಿಂದ ಇದೊಂದು ಲವ್‌ಸ್ಟೋರಿ ಎನ್ನಬಹುದಾಗಿದೆ.
ಶಿವರಾಜ್ ಮಧುಗಿರಿ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಚನೆ, ಚಿತ್ರಕತೆ, ಸಂಭಾಷಣೆ ಹಾಗೂ ನಾಯಕನಾಗಿ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿರುವ ವಿಷ್ಣುತೇಜ ನೀನಾಸಂ ಮತ್ತು ಚಿಣ್ಣರಮೇಳ ರಂಗಭೂಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ. ಮತ್ತು ಸ್ಟಾರ್ ನಿರ್ಮಾಪಕ, ವಿತರಕ ಜಯಣ್ಣ- ಭೋಗೇಂದ್ರ ಸಂಸ್ಥೆಯ ಭೋಗೆಂದ್ರ ಅವರ ಹತ್ತಿರದ ಸಂಬಂಧಿ.
ಪದ್ಮಶ್ರೀ, ಯಶಸ್ವಿನಿ ನಾಯಕಿಯರು. ಮುಖ್ಯ ಖಳನಾಯಕನಾಗಿ ಪಾರ್ಥ. ಇವರೊಂದಿಗೆ ನಾಗೇಂದ್ರ ಷಾ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ರವಿ ಭಟ್, ಮಜಾಭಾರತ್ ಖ್ಯಾತಿ ಚಿಲ್ಲರ್‌ಮಂಜು, ಧನಿಕಾ ಮುಂತಾದವರು ನಟಿಸಿದ್ದಾರೆ. ಮಲಯಾಳಂ ಹಿಟ್ ಚಿತ್ರ ’ಪ್ರೇಮಂ’ ಛಾಯೆ ಇದ್ದರೂ ಕತೆ ಬೇರಯದೇ ಇರುವುದು ವಿಶೇಷ.
ಡಾ.ನಾಗೇಂದ್ರಪ್ರಸಾದ್, ಕಿನ್ನಾಳ್‌ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ರಾಧಕೃಷ್ಣ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವು, ಸಂಕಲನ ಸುರೇಶ್ ಅರಸ್, ಸಾಹಸ ಕೌರವ ವೆಂಕಟೇಶ್, ನೃತ್ಯ ಕೆ.ಪಿ. ಶ್ರೀಕಾಂತ್ ಅವರದಾಗಿದೆ. ಶ್ರೀ ಭೈರವೇಶ್ವರ ಕಂಬೈನ್ಸ್‌ದಲ್ಲಿ ಸಿದ್ದಗೊಂಡಿರುವ ಚಿತ್ರಕ್ಕೆ ಗಂಗಮ್ಮ ಶಿವಣ್ಣ. ಬಿ.ಜಿ ಬಂಡವಾಳ ಹೂಡಿದ್ದು, ಪಾರ್ಥ(ನಂದೀಶ್) ಸಹ ನಿರ್ಮಾಪಕರಾಗಿದ್ದಾರೆ. ಅಂದಹಾಗೆ ’ಪ್ರೇಮನ್’ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.