Unlock Ragahava Review; ಲಾಕ್​, ಅನ್​ಲಾಕ್​ ನಡುವಿನ ಜೀವನ

1
Published on

ಚಿತ್ರ: ಅನ್​ಲಾಕ್​ ರಾಘವ

ನಿರ್ದೇಶನ: ದೀಪಕ್​ ಮಧುವನಹಳ್ಳಿ

ನಿರ್ಮಾಣ: ಮಂಜುನಾಥ್​, ಐಪ್ಲೆಕ್ಸ್​ ಗಿರೀಶ್​

ತಾರಾಗಣ: ಮಿಲಿಂದ್​, ರೇಚೆಲ್​ ಡೇವಿಡ್​, ಸಾಧು ಕೋಕಿಲ, ಶೋಭರಾಜ್​, ಅವಿನಾಶ್​, ಧರ್ಮಣ್ಣ ಕಡೂರ್​, ಭೂಮಿ ಶೆಟ್ಟಿ, ರಮೇಶ್​ ಭಟ್​ ಮುಂತಾದವರು

| ಹರ್ಷವರ್ಧನ್​ ಬ್ಯಾಡನೂರು

ಆತ ಕೋಟೆನಾಡಿನ ರಾಘವ (ಮಿಲಿಂದ್​). ಕಾರು, ಬೈಕ್​, ಬೀರು, ಮನೆ... ಹೀಗೆ ಯಾವುದೇ ಬೀಗವನ್ನು ಸಲೀಸಾಗಿ ತೆಗೆಯುವ ಒಂದು ವಿಶೇಷ ಟ್ಯಾಲೆಂಟ್​ ಅವನದು. ಬಾಲ್ಯದಿಂದಲೂ ಜಗಪತಿ (ಅವಿನಾಶ್​) ಮಗಳು ಜಾನಕಿಯನ್ನು (ರೇಚೆಲ್​) ಪ್ರೀತಿಸುತ್ತಿರುತ್ತಾನೆ. ಆಕೆಗೂ ಅವನೆಂದರೆ ಇಷ್ಟ. ಆದರೆ, ಪರಿಸ್ಥಿತಿ ಅವರನ್ನು ದೂರವಾಗಿಸುತ್ತದೆ. ಆಕೆಯ ನೆನಪಿನಲ್ಲೇ ಬೆಳೆಯುವ ರಾಘವ ಎಂತಹ ಲಾಕ್​ಅನ್ನೂ ಅನ್​ಲಾಕ್​ ಮಾಡುವುದನ್ನೇ ವೃತ್ತಿ ಮಾಡಿಕೊಂಡು, ಜಾನಕಿ ಅನ್​ಲಾಕ್​ ಯೂನಿವರ್ಸಿಟಿಯನ್ನೂ ಪ್ರಾರಂಭಿಸುತ್ತಾನೆ. ಜತೆಗೆ ಜಾನಕಿಗಾಗಿ ರಾಘವನ ಹುಡುಕಾಟವೂ ಮುಂದುವರಿದಿರುತ್ತದೆ. ಅದೇ ಸಮಯದಲ್ಲಿ 11ನೇ ಶತಮಾನದಲ್ಲಿ ಕೋಟೆನಾಡಿದ ಹೊಲದಲ್ಲಿ ಹೂತಿಟ್ಟ ನಿಧಿಯೊಂದರ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ದೊರೆಯುತ್ತದೆ. ಆಗ ಅಲ್ಲಿಗೆ ಪುರಾತತ್ವ ಇಲಾಖೆ ಆಯುಕ್ತ ಜಗಪತಿ ಅಧಿಕಾರಿಗಳ ಜತೆ ಅಲ್ಲಿಗೆ ಬಂದು ಅನ್ವೇಷಣೆ ಪ್ರಾರಂಭಿಸುತ್ತಾನೆ. ತಂದೆಯ ಜತೆ ಜಾನಕಿಯೂ ಬರುತ್ತಾಳೆ. ಪ್ರಾಚಿನ ವಸ್ತುಗಳನ್ನು ಸ್ಮಗಲ್​ ಮಾಡುವ ಪೀಟರ್​ (ಶೋಭರಾಜ್​) ಮತ್ತು ಪಾಂಡೆ (ಸುಂದರ್​) ಗ್ಯಾಂಗ್​ಗಳೂ ಆ ನಿಧಿಯ ಹಿಂದೆ ಬೀಳುತ್ತಾರೆ. ರಾಘವನಿಗೆ ಜಾನಕಿ ಸಿಗುತ್ತಾಳಾ? ನಿಧಿ ಯಾರ ಪಾಲಾಗುತ್ತದೆ? ಮುಂದೇನು? ತಿಳಿಯಬೇಕಾದರೆ "ಅನ್​ಲಾಕ್​ ರಾಘವ'ನನ್ನು ನೋಡಿ.

ಯುವಪ್ರತಿಭೆ ಮಿಲಿಂದ್​ ಡಾನ್ಸ್​, ಆ್ಯಕ್ಷನ್​ ಜತೆಗೆ ನಟನೆಯಲ್ಲೂ ಗಮನ ಸೆಳೆಯುತ್ತಾರೆ. ಆರೂವರೆ ಅಡಿಯ ಕಟೌಟ್​ನಂತಿರುವ ಅವರು ಒಳ್ಳೆ ಪಾತ್ರ, ಕಥೆಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ರೇಚೆಲ್​ ಡೇವಿಡ್​ ಅಂದದ ಜತೆಗೆ ಅಭಿನಯದಲ್ಲೂ ಚಂದ. ಮೊದಲರ್ಧ ಟೇಕಾಫ್​ ಸ್ವಲ್ಪ ನಿಧಾನ ಎನಿಸಬಹುದು. ಆದರೆ, ದ್ವೀತಿಯಾರ್ಧದಲ್ಲಿ ಸಾಧುಕೋಕಿಲ ಜಪಾನೀ ವೇಷ-ಭಾಷೆ, ರೊಮ್ಯಾಂಟಿಕ್​ ಹೀರೋ ಆಗುವ ಖಡಕ್​ ವಿಲನ್​ ಶೋಭರಾಜ್​ ಕಾಮಿಡಿ ಕಚಗುಳಿ ನೀಡುತ್ತಾರೆ. ಅನೂಪ್​ ಸೀಳಿನ್​ ಸಂಗೀತದಲ್ಲಿ "ರಾಘವ ರಾಘವ' ಸಾಂಗ್​ ಪದೇಪದೆ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಸಂಭಾಷಣೆ, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಒಂದೊಳ್ಳೆ ಕಮರ್ಷಿಯಲ್​ ಸಿನಿಮಾ ನೋಡಲಿಚ್ಛಿಸುವವರು "ಅನ್​ಲಾಕ್​ ರಾಘವ'ನನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net