ರಿಲೀಸ್​ಗೆ ರೆಡಿಯಾಗಿದೆ ದಿಗ್ವಿಜಯ ; ಜಯಪ್ರಭು, ಸ್ನೇಹ ನಟಿಸಿರುವ ಸಿನಿಮಾ

WhatsApp Image 2023-09-11 at 9.48.48 AM
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

60ಕ್ಕೂ ಅಧಿಕ ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ 'ಸೀಯು', 'ಕರ್ತ' ಚಿತ್ರಗಳನ್ನು ನಿರ್ದೇಶಿಸಿರುವ ದುರ್ಗಾ ಪಿ.ಎಸ್. ಹಾಗೂ ಹೊನ್ನವಳ್ಳಿ ಶ್ರಿಕಾಂತ್ ಜಂಟಿಯಾಗಿ ನಿರ್ದೇಶಿಸಿರುವ ಚಿತ್ರ 'ದಿಗ್ವಿಜಯ'. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರಕ್ಕೆ ಸೆನ್ಸಾರ್​ ಆಗಿದ್ದು “ಯು” ಸರ್ಟಿಫಿಕೇಟ್ ದೊರೆತಿದೆ.

ವರದಿಗಾರನೊಬ್ಬ ಅರೆ ಹುಚ್ಚನನ್ನು ಮುಂದಿಟ್ಟುಕೊಂಡು ಕೇವಲ ಮೂರು ದಿನಗಳಲ್ಲಿ ರಾಜ್ಯದ ಎಲ್ಲ ರೈತರ ಸಾಲವನ್ನು ಹೇಗೆ ಮನ್ನಾ ಮಾಡಿಸುತ್ತಾನೆ? ಎನ್ನುವುದೇ ಚಿತ್ರದ ಕಥಾಹಂದರ. ಚಿತ್ರದಲ್ಲಿ ನಾಯಕನ ತಂದೆ, ತಾಯಿ ಕೂಡ ರೈತರೇ ಆಗಿದ್ದು, ಅವರೂ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಟ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್​​ನಿಂದ ನಾಯಕನ ಗೆಳೆಯ ಅರೆ ಹುಚ್ಚನಾಗಿರುತ್ತಾನೆ. ಬಳಿಕ ನಾಯಕನ ಹೋರಾಟ ಹೇಗಿರುತ್ತದೆ? ಎಂಬುದರ ಸುತ್ತ ಕಥೆ ಸಾಗುತ್ತದೆ.

ಗೋವಾ ಫಿಲಂ ಫೆಸ್ಟಿವಲ್ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಹಾಗು ನಾಯಕ ಜಯಪ್ರಭುಗೆ ಅತ್ಯುತ್ತಮ ನಟ ಸೇರಿ ಆರು ಪ್ರಶಸ್ತಿಗಳ ಗರಿ ದೊರೆತಿದೆ. ಜಯಪ್ರಭು ಆರ್ ಲಿಂಗಾಯತ್ ಚಿತ್ರದ ನಾಯಕನಾಗಿ ನಟಿಸಿದ್ದು, ಅವರಿಗೆ ಸ್ನೇಹ ನಾಯಕಿಯಾಗಿದ್ದಾರೆ. ಜತೆಗೆ ಸುಚೇಂದ್ರ ಪ್ರಸಾದ್, ಪಟ್ರೆ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ.ಪಿ, ರಮಿತ ರಿತಿಕ ಯಲ್ಲಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ದಿಗ್ವಿಜಯ'ದಲ್ಲಿ ಐದು ಹಾಡುಗಳಿದ್ದು ಹರ್ಷ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ಸೂಪರ್ ಸುಬ್ಬು ನೃತ್ಯ ನಿರ್ದೇಶನ, ಹಾಗೂ ಜಗ್ಗು ಸಾಹಸವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net