ಬಾರದ ಲೋಕಕ್ಕೆ ಸತ್ಯಜಿತ್: ಬಹು ಅಂಗಾಂಗ ವೈಫಲ್ಯ..

Sathyajith
Published on

ಬೆಂಗಳೂರು: ಹಲವು ದಿನಗಳಿಂದ ಗ್ಯಾಂಗ್ರಿನ್ ಮತ್ತು ಇತರೆ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಲಾವಿದ ಸತ್ಯಜಿತ್ (72) ಭಾನುವಾರ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಏಳು ವರ್ಷಗಳ ಹಿಂದೆ ಮಧುಮೇಹ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ ಬಂದು ಕಾಲನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇತ್ತೀಚಿಗೆ ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯ ಉಂಟಾಗಿ ವಾರದ ಹಿಂದೆ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸತತ ಚಿಕಿತ್ಸೆಯ ನಂತರವೂ ಚೇತರಿಕೆ ಕಂಡುಬಂದಿರಲಿಲ್ಲ. ಶನಿವಾರ ರಾತ್ರಿ ವೆಂಟಿಲೇಟರ್ ಹಾಸಿಗೆಯಲ್ಲಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಆರೋಗ್ಯದಲ್ಲಿ ತೀವ್ರ ಏರು-ಪೇರು ಉಂಟಾಗಿದ್ದು, ತಡರಾತ್ರಿ 2 ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಸತ್ಯಜಿತ್ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯ ನಂತರ ಹೆಗಡೆ ನಗರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಗನನ್ನು ದೊಡ್ಡ ಹೀರೋ ಮಾಡಬೇಕು, ಮಗಳನ್ನು ಪೈಲಟ್ ಮಾಡಬೇಕು ಎಂಬುದು ಸತ್ಯಜಿತ್​ರ ದೊಡ್ಡ ಕನಸಾಗಿತ್ತು. ಮಗಳಿಗೆ ಚೆನ್ನಾಗಿ ಓದಿಸಬೇಕೆಂಬ ಕಾರಣಕ್ಕೆ ಅವರು 35 ಲಕ್ಷ ರೂ.ಗಳ ಮನೆಯನ್ನೂ ಮಾರಿದ್ದರು. ಮಗ-ಮಗಳು ಕೈಗೆ ಬಂದುಬಿಟ್ಟರೆ, ಮುಂದಿನ ಜೀವನವನ್ನು ನೆಮ್ಮದಿಯಾಗಿ ಕಳೆಯಬಹುದು ಎಂದು ಸತ್ಯಜಿತ್ ಭಾವಿಸಿದ್ದರು. ಆದರೆ, ಆಗಿದ್ದೇ ಬೇರೆ. ಅಂದುಕೊಂಡಂತೆ ಮಗ ಚಿತ್ರರಂಗದಲ್ಲಿ ಬೆಳೆಯಲಿಲ್ಲ. ಮಗಳ ಜತೆಗೆ ಕಾರಣಾಂತರಗಳಿಂದ ಜಗಳಗಳಾಗಿ ಇಬ್ಬರೂ ದೂರವಾದರು, ಅದೇ ಕೊರಗಿನಿಂದ ಸತ್ಯಜಿತ್ ಆರೋಗ್ಯ ಪದೇಪದೆ ಕೆಡುತ್ತಾ ಬಂದಿತು. ಗ್ಯಾಂಗ್ರಿನ್​ಗೂ ತುತ್ತಾದರು. ಆರೋಗ್ಯ ಸುಧಾರಿಸಿ ಬೇಗಬರಬಹುದು ಎಂದುಕೊಂಡಿದ್ದು ಸುಳ್ಳಾಯಿತು. ಸತ್ಯಜಿತ್ ಬಾರದ ಲೋಕಕ್ಕೆ ಹೊರಟು ಹೋದರು.

ಸೈಯ್ಯದ್ ನಿಜಾಮುದ್ದೀನ್ ಸತ್ಯಜಿತ್ ಆದಾಗ: ಸತ್ಯಜಿತ್ ಮೂಲತಃ ಉತ್ತರ ಕರ್ನಾಟಕದವರು. ಅವರ ನಿಜವಾದ ಹೆಸರು ಸೈಯ್ಯದ್ ನಿಜಾಮುದ್ದೀನ್. ಯಾರಾದರೂ ಸೈಯದ್ ಅಥವಾ ಸೈಯ್ಯದ್ ಭಾಯ್ ಎಂದರೆ, ಸತ್ಯಜಿತ್ ಅಂತ ಕರೆಯುವಂತೆ ಹೇಳುತ್ತಿದ್ದರು. ಅದಕ್ಕೆ ಕಾರಣ, ಸತ್ಯಜಿತ್ ಎನ್ನುವ ಹೆಸರು ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಹೆಸರು, ಖ್ಯಾತಿ, ಹಣ ಎಲ್ಲವನ್ನೂ ಅವರು ನೋಡಿದ್ದು ಸತ್ಯಜಿತ್ ಹೆಸರಿನಿಂದಲೇ. ಹಾಗಾಗಿ, ಅದೇ ಹೆಸರಿನಿಂದ ಗುರುತಿಸಿಕೊಳ್ಳುವುದಕ್ಕೆ ಅವರು ಇಷ್ಟಪಡುತ್ತಿದ್ದರು.

ಕೆಎಸ್​ಆರ್​ಟಿಸಿ ಡ್ರೖೆವರ್​ಗೆ ಬಾಲಿವುಡ್ ಅವಕಾಶ: ಸತ್ಯಜಿತ್ ಕೆಎಸ್​ಆರ್​ಟಿಸಿ ಬಸ್ ಡ್ರೖೆವರ್ ಆಗಿ ಒಂದಷ್ಟು ವರ್ಷ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿದ್ದಾರೆ. ಬಸ್ ಚಾಲನೆ ವೃತ್ತಿಯಾದರೆ, ಅಭಿನಯ ಅವರಿಗೆ ಪ್ರವೃತ್ತಿಯಾಗಿತ್ತು. ಹಲವು ನಾಟಕಗಳಲ್ಲಿ ನಟಿಸಿದ್ದ ಅವರು, ‘ಅಲ್ಲಾ ನೀನೇ ಈಶ್ವರ್ ನೀನೇ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಆದರೆ, ಅವರು ಬೇಡಿಕೆಯ ನಟರಾಗುವುದಕ್ಕೆ ಒಂದಿಷ್ಟು ಸಮಯ ಹಿಡಿಯಿತು. ಈ ಮಧ್ಯೆ, 1986ರಲ್ಲಿ ನಾನಾ ಪಾಟೇಕರ್ ಜತೆಗೆ ಹಿಂದಿಯ ‘ಅಂಕುಶ್’ ಚಿತ್ರದಲ್ಲಿ ನಟಿಸಿದರು. ಚಿತ್ರದಲ್ಲಿ ಅವರದ್ದು ರೌಡಿ ಪಾತ್ರವಾದರೂ, ಅದು ಜನಪ್ರಿಯವಾಯಿತು. ಸತ್ಯಜಿತ್​ಗೆ ಹೆಸರು ಸಹ ತಂದುಕೊಟ್ಟಿತು. ಅಲ್ಲಿಂದ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾದ ಅವರು, ‘ಅರುಣ ರಾಗ’, ‘ಮಿಸ್ಟರ್ ರಾಜ’ ಮುಂತಾದ ಚಿತ್ರಗಳಲ್ಲಿ ನಟಿಸಿದರು, ಅವರ ವಿಶಿಷ್ಟ ಮ್ಯಾನರಿಸಂ ಮತ್ತು ಮಾತಿನ ಶೈಲಿ ಪ್ರೇಕ್ಷಕರಿಗೆ ಮತ್ತು ಚಿತ್ರರಂಗದವರಿಗೆ ಇಷ್ಟವಾಯಿತು. ಕ್ರಮೇಣ ಸತ್ಯಜಿತ್​ಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿ, ಮುಂದಿನ 25 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಬೇಡಿಕೆಯ ನಟರಾಗಿ ಬೆಳೆದರು. 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದರು.

ಅಭಿಜಾತ ಕಲಾವಿದ: ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಶಿವರಾಜಕುಮಾರ್, ದೇವರಾಜ್, ಸಾಯಿಕುಮಾರ್ ಮುಂತಾದವರ ಚಿತ್ರಗಳಲ್ಲಿ ತಪ್ಪದೇ ಪಾತ್ರ ನಿರ್ವಹಿಸುತ್ತಿದ್ದ ಅವರು, ಭ್ರಷ್ಟ ಪೊಲೀಸ್ ಅಧಿಕಾರಿ ಅಥವಾ ರೌಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಿದ್ದೇ ಹೆಚ್ಚು. ನಂತರದ ವರ್ಷಗಳಲ್ಲಿ ಬೇರೆಬೇರೆ ಪಾತ್ರಗಳಲ್ಲಿ ನಟಿಸುವ ಮೂಲಕ ತಾನೊಬ್ಬ ಅಭಿಜಾತ ಕಲಾ ವಿದ ಎಂದು ತೋರಿಸಿದರು. ‘ಆಪ್ತಮಿತ್ರ’, ‘ಹುಡುಗಾಟ’, ‘ಮಾಣಿಕ್ಯ’, ‘ರನ್ನ’ ಮುಂತಾದ ಚಿತ್ರಗಳಲ್ಲಿ ನಟನೆಯಿಂದ ಗಮನಸೆಳೆದರು.

ಕಾಲಿಲ್ಲದಿದ್ದರೂ ನಟನೆ: ಇತ್ತೀಚಿನ ವರ್ಷಗಳಲ್ಲಿ, ಒಂದು ಕಾಲಿಲ್ಲದಿದ್ದರೂ ಕುಳಿತುಕೊಂಡೇ ನಟಿಸುತ್ತಿದ್ದ ಸತ್ಯಜಿತ್ ಅವರ ಬಿಡುಗಡೆಯಾದ ಕೊನೆಯ ಚಿತ್ರವೆಂದರೆ ಅದು 2018ರಲ್ಲಿ ಬಿಡುಗಡೆಯಾದ ‘ಸೆಕೆಂಡ್ ಹಾಫ್’. ಆ ನಂತರ ಅವರು ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಸುದ್ದಿಯಾದರೂ, ಚಿತ್ರ ಬಿಡುಗಡೆಯಾಗಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ನಟಿಸಿದ್ದ ‘ಕಾಗೆ ಮೊಟ್ಟೆ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು.

ಕೌಟುಂಬಿಕ ಕಲಹದಿಂದ ನೋವು: ಸದಾ ಬಿಜಿಯಾಗಿರುತ್ತಿದ್ದ ಸತ್ಯಜಿತ್, ಇತ್ತೀಚಿನ ವರ್ಷಗಳಲ್ಲಿ ಸುದ್ದಿಯಾಗಿದ್ದು ಅನಾರೋಗ್ಯದಿಂದಲೇ ಎಂದರೆ ತಪ್ಪಿಲ್ಲ. ಕೆಲವು ವರ್ಷಗಳ ಹಿಂದೆ ಗ್ಯಾಂಗ್ರೀನ್​ನಿಂದ ಅವರ ಒಂದು ಕಾಲು ಕತ್ತರಿಸಲಾಯಿತು. ಅಲ್ಲಿಯವರೆಗೂ ದುಡಿದಿದ್ದ ಲಕ್ಷಾಂತರ ಹಣ, ಅನಾರೋಗ್ಯಕ್ಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚಾಗಿತ್ತು. ಒಂದು ಕಡೆ ದುಡಿದ ಹಣವೂ ಖರ್ಚಾಗಿತ್ತು. ಇನ್ನೊಂದು ಕಡೆ ಕುಟುಂಬ ಕಲಹ. ಇದೆಲ್ಲದರಿಂದ ನೊಂದಿದ್ದರು.

ಜೀವನದಲ್ಲಿ ಮೊದಲ ಹಾಫ್​ಗಿಂತ ಸೆಕೆಂಡ್ ಹಾಫ್ ಚೆನ್ನಾಗಿರಬೇಕು. ಸಿನಿಮಾದಲ್ಲಿಯೂ ಸೆಕೆಂಡ್ ಹಾಫ್ ಚೆನ್ನಾಗಿದ್ದರೆ, ಚಿತ್ರ ಗೆಲ್ಲುತ್ತದೆ. ಆದರೆ, ಸತ್ಯಜಿತ್ ಬಾಳಿನಲ್ಲಿ ಹಾಗಾಗಲಿಲ್ಲ. 30 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಒಟ್ಟಿಗೆ ಸಾಕಷ್ಟು ಸಿನಿಮಾ ಮಾಡಿದ್ದೇವೆ. ಮಾತಿಗೆ ಕುಳಿತಾಗ ಹಳೇ ದಿನಗಳನ್ನು ಮಾತನಾಡುವುದೇ ನಮ್ಮ ಕೆಲಸ.

| ದೊಡ್ಡಣ್ಣ ಹಿರಿಯ ನಟ

ನಿಜಕ್ಕೂ ಇದು ಬೇಸರದ ಸಂಗತಿ. ನನ್ನ ಅಪು್ಪ, ಅಭಿ, ವೀರಕನ್ನಡಿಗ ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಒಂದೂವರೆ ವರ್ಷದ ಹಿಂದಷ್ಟೇ ನಮ್ಮ ಮನೆಗೆ ಬಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

| ಪುನೀತ್ ರಾಜಕುಮಾರ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net