ಲಕ್ಕಿಯಾದ ವಿಕ್ಕಿ ವರುಣ್​, ಧನ್ಯಾ ರಾಮಕುಮಾರ್​ ; ಕೈಹಿಡೀತು ಕಪ್ಪು ಕಲ್ಲು!

1111
Published on

‘ಕೆಂಡಸಂಪಿಗೆ‘, ‘ಕಾಲೇಜ್​ ಕುಮಾರ್​‘ ಖ್ಯಾತಿಯ ನಟ ವಿಕ್ಕಿ ವರುಣ್​ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿದ್ದ ಚಿತ್ರ ‘ಕಾಲಾಪತ್ಥರ್​‘. ಈ ಚಿತ್ರದಲ್ಲಿ ಅವರೇ ನಾಯಕನಾಗಿದ್ದು, ಅವರಿಗೆ ಧನ್ಯಾ ರಾಮಕುಮಾರ್​ ನಾಯಕಿಯಾಗಿದ್ದಾರೆ. ‘ರಾಮಾ ರಾಮಾ ರೇ‘, ‘ಒಂದಲ್ಲ ಎರಡಲ್ಲಾ‘ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್​ ಈ ಚಿತ್ರಕ್ಕೆ ಕಥೆ ಬರೆದಿದ್ದು, ಕಳೆದ ಸೆ. 13ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ವಿಕ್ಕಿ ಮೊದಲ ನಿರ್ದೇಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಸ್ಯಾಂಡಲ್​ವುಡ್​ ತಾರೆಯರೂ ಸಹ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇತ್ತೀಚೆಗಷ್ಟೆ ‘ಕಾಲಾಪತ್ಥರ್​‘ ಚಿತ್ರದ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ನಟರಾದ ಸತೀಶ್ ನೀನಾಸಂ, ನಿರಂಜನ್, ‘ಶಿಷ್ಯ‘ ದೀಪಕ್, ಶಿವರಾಜ್ ಕೆ.ಆರ್. ಪೇಟೆ ಹಾಗೂ ನಟಿಯರಾದ ಸೋನು ಗೌಡ, ಅನುಷಾ ರೈ, ‘ಭೀಮ’ ಖ್ಯಾತಿಯ ಅಶ್ವಿನಿ, ನೀನಾಸಂ ಅಶ್ವತ್ಥ್​, ಆದಿತ್ಯ ಶಶಿಕುಮಾರ್​, ನಿರಂಜನ್​ ಸುಧೀಂದ್ರ, ರಾಜೇಶ್​ ನಟರಂಗ, ಪೃಥ್ವಿ ಶಾಮನೂರ್​, ನಿರ್ದೇಶಕ ಹರಿ ಸಂತು, ಸೇರಿ ಹಲವು ತಾರೆಯರು ಸಿನಿಮಾ ವೀಕ್ಷಿಸಿದರು. ಹಾಗೆಯೇ ನಿರ್ಮಾಪಕ ಮತ್ತು ವಿತರಕರಾದ ಸುಪ್ರೀತ್, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಮೊದಲಾದವರು ಸಿನಿಮಾವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಭುವನ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾದ ಚೊಚ್ಚಲ ಚಿತ್ರ ಇದಾಗಿದ್ದು, ಮೊದಲ ಸಿನಿಮಾದಲ್ಲೇ ಗೆಲುವು ಕಂಡಿದ್ದಾರೆ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ. ಇದೇ ಹುರುಪಿನಲ್ಲಿ ಇನ್ನೆರಡು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಲಿದ್ದಾರೆ ಎಂಬುದು ವಿಶೇಷ. ಅನೂಪ್ ಸೀಳಿನ್ ಸಂಗೀತ ನೀಡಿರುವ ಕಾಲಾಪತ್ಥರ್ ಚಿತ್ರವನ್ನು ಉದಯ್ ಕೆ ಮೆಹ್ತಾ ವಿತರಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net